ಚಿತ್ರದುರ್ಗ: ಕೋವಿಡ್ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ಬಾಕಿ ಇರುವ ಒಂದು ಲಕ್ಷ ಕಾರ್ಮಿಕರಿಗೆ ಕೂಡಲೇ 5 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಹಿಂದೆ ಕಾರ್ಮಿಕರ ಮಕ್ಕಳ ಮದುವೆಗೆ ಧನಸಹಾಯ ನೀಡಿದ 25 ಸಾವಿರ ರೂ.ಗಳ ಬಾಂಡ್ ಎರಡು ವರ್ಷ ಕಳೆದರೂ ಇನ್ನು ನೀಡಿಲ್ಲ. ಈಗ ಮದುವೆ ಬಾಂಡ್ ರದ್ದಾಗಿರುವುದರಿಂದ ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪೂರ್ತಿ ಹಣ ಜಮಾ ಮಾಡಬೇಕು. ಈಗ ನೀಡಲಾಗುತ್ತಿರುವ ಮದುವೆ ಧನ ಸಹಾಯ ಐವತ್ತು ಸಾವಿರ ರೂ. ಗಳು ಖಾತೆಗೆ ಜಮಾ ಆಗಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ಮರಣ ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಇರುವ ಆರು ತಿಂಗಳ ಕಾಲಮಿತಿಯನ್ನು ಕನಿಷ್ಟ ಒಂದು ತಿಂಗಳಿಗೆ ಏರಿಸಬೇಕು. ನೋಂದಣಿ ಮತ್ತು ನವೀಕರಣ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಲ್ಲಿಸಲಾದ ಮದುವೆ, ಮರಣ, ವೈದ್ಯಕೀಯ ಮತ್ತು ವಿದ್ಯಾರ್ಥಿ ವೇತನ ಅರ್ಜಿಗಳಲ್ಲಿ 2017 ರಿಂದ ಬಾಕಿಯಿರುವ ಸಂಬಂಧ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದರೂ ಇತ್ಯರ್ಥವಾಗಿಲ್ಲ. ಈ ಸಂಬಂಧ ವಿಶೇಷ ಅಭಿಯಾನ ನಡೆಸಿ ಇತ್ಯರ್ಥಪಡಿಸಿರುವುದು ಸ್ವಾಗತಾರ್ಹ.
ಆದರೆ ವಿಲೇವಾರಿ ಆಗಿದ್ದಾವೆಂದು ಹೇಳಲಾದ ಅರ್ಜಿಗಳಿಗೆ ಬ್ಯಾಂಕ್‌ನಿಂದ ಹಣ ವರ್ಗಾವಣೆ ಆಗುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಸೌಲಭ್ಯಗಳಿಗೆ ಸಲ್ಲಿಸಲಾದ ಅರ್ಜಿಗಳು ತಿರಸ್ಕೃತಗೊಂಡಾಗ ಅವುಗಳನ್ನು ಪುನರ್ ಸಲ್ಲಿಸಲು ಮೇಲ್ಮನವಿ ಸಮಿತಿಗಳನ್ನು ರಚಿಸುವ ಕುರಿತು ಮಂಡಳಿ ಸಭೆಯಲ್ಲಿ ತೀರ್ಮಾನವಾಗಿದೆ. ಇದು ತುರ್ತಾಗಿ ಜಾರಿಯಾಗಬೇಕು ಎಂದರು.
ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್‌ಪೀರ್, ಬಿ.ಸಿ.ನಾಗರಾಜಚಾರಿ, ಸಣ್ಣಮ್ಮ ಮತ್ತಿತರರು ಇದ್ದರು.¬