ಚಳ್ಳಕೆರೆ: ತಾಲೂಕಿನಾದ್ಯಂತ ಸಾವಿರಾರು ರೈತರು ಕಳೆದ ಜೂನ್‌ನಲ್ಲಿ ಖಾಸಗಿ ವಿಮಾ ಕಂಪನಿಗಳಿಗೆ ವಿಮಾ ಹಣ ಪಾವತಿಸಿದ್ದಾರೆ. ಇದೇ ತಿಂಗಳ 30ರೊಳಗೆ ಬೆಳೆ ವಿಮೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ತಾಲೂಕು ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಎಚ್ಚರಿಕೆ ನೀಡಿದರು.
ಸೋಮವಾರ ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್, ಸಹಾಯಕ ಕೃಷಿ ನಿರ್ದೇಶಕ ಡಾ| ಮೋಹನ್‌ಕುಮಾರ್, ಕೃಷಿ ಅ ಧಿಕಾರಿ ಅಶೋಕ್ ಹಾಗೂ ಖಾಸಗಿ ವಿಮಾ ಕಂಪನಿಗಳ ಪ್ರತಿನಿ ಧಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಖಾಸಗಿ ವಿಮಾ ಕಂಪನಿಯವರು ಜೂನ್ 30 ರೊಳಗೆ ರೈತರಿಂದ ಹಣವನ್ನು ಪಾವತಿ ಮಾಡಿಸಿಕೊಂಡಿದ್ದಾರೆ. ಈಗ ಬೆಳೆ ನಷ್ಟ ಪರಿಹಾರ ನೀಡುವ ಸಂದರ್ಭದಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳದೆ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆಂದು ಆರೋಪಿಸಿದರು. ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಮಾತನಾಡಿ, ಸಾವಿರಾರು ರೈತರು ಖಾಸಗಿ ವಿಮಾ ಕಂಪನಿಯ ಬೆಳೆ ವಿಮೆಯನ್ನು ಆಧರಿಸಿ ಹಣ ಪಾವತಿಸಿರುತ್ತಾರೆ. ಖಾಸಗಿ ವಿಮಾ ಕಂಪನಿಯವರು ಬೆಳೆ ವಿಮೆ ಹಣವನ್ನು ಪಾವತಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ಏ. 30 ರೊಳಗೆ ಬೆಳೆ ವಿಮೆ ಪಾವತಿಸಿದ ಎಲ್ಲಾ ರೈತರಿಗೂ ನಿಯಮಾನುಸಾರ ಬೆಳೆ ವಿಮೆ ಹಣ ನೀಡುವಂತೆ ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಡಾ| ಮೋಹನ್ ಕುಮಾರ್ ಮಾತನಾಡಿ, ಮುಂಗಾರು ಹಂಗಾಮಿನ ಶೇಂಗಾ, ಈರುಳ್ಳಿ, ಸೂರ್ಯಕಾಂತಿ, ತೊಗರಿ ಬೆಳೆಗಳಿಗೆ ತಾಲೂಕಿನ 34,161 ರೈತರು ಪ್ರತಿ ಹೆಕ್ಟೇರ್‌ಗೆ 441ರೂ.ಗಳಂತೆ ಬೆಂಗಳೂರಿನ ಯುನಿರ್ವಸಲ್ ಸಂಪ್ಕೋ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ. ಕಂಪನಿಯವರೇ ಇಲ್ಲಿಗೆ ಆಗಮಿಸಿ ವಾಸ್ತವ ಸ್ಥಿತಿಯನ್ನು ಅವಲೋಕಿಸಿ ಪರಿಹಾರದ ಮೊತ್ತ ನಿರ್ಧರಿಸಿ ನಂತರ ರೈತರ ಖಾತೆಗೆ ಹಣ ಜಮಾ ಮಾಡಲಿದ್ದಾರೆ ಎಂದು ತಿಳಿಸಿದರು.
ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.