ಹಿರಿಯೂರು: ದೇಶದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ನಿರ್ಮೂಲನೆಗೆ ಅಂಬೇಡ್ಕರ್ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ, ಅಂಬೇಡ್ಕರ್ ಕೇವಲ ದಲಿತರಿಗೆ ಅಷ್ಟೆ ಅಲ್ಲ , ಎಲ್ಲಾ ಸಮುದಾಯಗಳ ನಾಯಕನಾಗಿ, ವಿಶ್ವ ನಾಯಕರಾಗಿದ್ದಾರೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಶ್ರೀರಾಮುಲು ಹೇಳಿದರು.
ತಾಲೂಕು ಆಡಳಿತದಿಂದ ನಗರದ ಟಿ.ಬಿ. ವೃತ್ತದಲ್ಲಿ ನಿರ್ಮಿಸಿದ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಸ್ವಾಭಿಮಾನಿ ಅಂಬೇಡ್ಕರ್ ಪ್ರತಿಮೆ ಜ.26ರಂದು ಅನಾವರಣಗೊಂಡಿರುವುದು ಅರ್ಥಪೂರ್ಣ. ಜೀವನದಲ್ಲಿ ತಾವು ಕಂಡಂತಹ ಕಷ್ಟಗಳು ಬೇರೆ ಯಾರಿಗೂ ಬರಬಾರದೆಂದು ಹೊರರಾಷ್ಟ್ರದಲ್ಲಿ ಅತ್ಯುನ್ನತ ಶಿಕ್ಷಣ ಪಡೆದು ಸಂವಿಧಾನ, ಕಾನೂನುಗಳನ್ನು ಎಲ್ಲರಿಗೂ ನೀಡಿ ಸಾಮಾಜಕ ನ್ಯಾಯ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಂತೆ ಮೀಸಲಾತಿ, ಕಾನೂನುಗಳನ್ನು ಸಂವಿಧಾನದಲ್ಲಿ ರಚಿಸಿದ್ದಾರೆ
ಎಂದರು.
ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಮಹಿಳೆಯರ ಸ್ಥಿತಿಗತಿಗಳು, ಕಟ್ಟುಪಾಡುಗಳು, ಕೇವಲ ಕುಟುಂಬಕ್ಕಷ್ಟೆ ಮೀಸಲಾಗಿತ್ತು, ಮನೆ ಬಿಟ್ಟು ಹೊರಗೆ ಬರುವಂತೆ ಇರಲಿಲ್ಲ, ಅತ್ಯಂತ ಕಷ್ಟಕರವಾಗಿತ್ತು. ಅಂಬೇಡ್ಕರ್‌ರವರ ಮೀಸಲಾತಿ ಕೊಡುಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಉದ್ದೇಶ ಲಿಂಗಬೇಧ ಇಲ್ಲದೆ ಸರಿಸಮಾನತೆ ಹೊಂದಿ, ಶೇ. 50 ರಷ್ಟು ಮೀಸಲಾತಿ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಜಿ.ಎಸ್. ಮಂಜುನಾಥ ಮಾತನಾಡಿ, ಒಳ್ಳೆಯ ಕೆಲಸಗಳಿಗೆ ಜಾತಿ, ಧರ್ಮ ಪಕ್ಷ ನೋಡದೆ, ಆ ಕೆಲಸದಲ್ಲಿ ಎಲ್ಲರೂ ಭಾಗವಹಿಸಬೇಕು. ಶಾಸಕಿ ಪೂರ್ಣಿಮಾ ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲ ಸಂಘಟನೆಗಳು ಬೆಂಬಲ ನೀಡಬೇಕು ಎಂದರು.
ಕಳೆದ ಮೂವತ್ತು ವರ್ಷಗಳಿಂದ ಮುಚ್ಚಿರುವ ಇಲ್ಲಿನ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿ ಈ ಭಾಗದ ಜನರಿಗೆ ಉದ್ಯೋಗ ನೀಡಿ ರೈತರಿಗೆ
ಅನುಕೂಲ ಮಾಡುವಂತೆ ಶಾಸಕರಿಗೆ ಮನವಿ ಮಾಡಿದರು.
ಜಿಪಂ ಸದಸ್ಯರಾದ ರಾಜೇಶ್ವರಿ, ಡಿ.ಟಿ. ಶ್ರೀನಿವಾಸ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಓಂಕಾರಪ್ಪ, ತಾಪಂ ಸದಸ್ಯರಾದ ಯಶವಂತ್, ದಲಿತ ಮುಖಂಡರಾದ ಜೆ.ಜೆ, ಹಟ್ಟಿ ತಿಪೇಸ್ವಾಮಿ, ರಂಗಸ್ವಾಮಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್, ಎಂ. ಜಗದೀಶ್, ನಗರಸಭೆ ಸದಸ್ಯರಾದ ಬಾಲಕೃಷ್ಣ, ಆಲೂರು ಕಾಂತಯ್ಯ, ಎಚ್.ತಿಮ್ಮಯ್ಯ, ಜಿ.ಎಲ್. ಮೂರ್ತಿ, ಟಿ.ಚಂದ್ರಶೇಖರ್, ಭೂತಾಬೋವಿ, ಬಿ.ಕೆ. ಕರಿಯಪ್ಪ, ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಓದಿ : ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರ ಶೋಷಣೆ: ಚನ್ನಬಸಯ್ಯ