ಚಿತ್ರದುರ್ಗ: ಕೊರೋನಾ ಎರಡನೇ ಅಲೆ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ಕೇಂದ್ರದ ಮಾದರಿಯಲ್ಲಿ ರಾಜ್ಯದ ಸರ್ಕಾರಿ ಕಚೇರಿಗಳಲ್ಲೂ ರೊಟೇಷನ್ ಪದ್ಧತಿ ಅನುಸರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮನವಿ ಮಾಡಿದ್ದಾರೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಂಜುನಾಥ್ ತಿಳಿಸಿದ್ದಾರೆ.
ಭಾನುವಾರ ನೌಕರರ ಸಂಘದ ರಾಜ್ಯದ ಎಲ್ಲ ಜಿಲ್ಲಾಧ್ಯಕ್ಷರ ಜತೆ ರಾಜ್ಯಾಧ್ಯಕ್ಷರು ವರ್ಚುಯಲ್ ಮೀಟಿಂಗ್ ನಡೆಸಿದ್ದು, ಈ ವೇಳೆ ಹಲವು ವಿಷಯಗಳು ಚರ್ಚೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಸದಸ್ಯತ್ವ ಶುಲ್ಕ, ಶಿಕ್ಷಕರ ವರ್ಗಾವಣೆ, ಮುಂಬಡ್ತಿ, ಜ್ಯೇಷ್ಠತಾ ಪಟ್ಟಿ, ಪ್ರತಿಭಾ ಪುರಸ್ಕಾರ, ನೌಕರರಿಗೆ ಸರ್ವೋತ್ತಮ ಪ್ರಶಸ್ತಿ, ಜಂಟಿ ಸಮಾಲೋಚನೆ ಸಭೆ, 371 ಜೆ ಯಲ್ಲಿ ನೌಕರರಿಗೆ ಆಗುವ ಅನ್ಯಾಯ ಸೇರಿದಂತೆ ಹಲವು ವಿಷಗಳ ಕುರಿತು ಚರ್ಚಿಸಲಾಗಿದೆ. ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೌಕರರ ಕುಟುಂಬ ವರ್ಗದಲ್ಲಿ ಆತಂಕ ಮೂಡಿದೆ.
ಆದ್ದರಿಂದ ಕೇಂದ್ರ ಮಾದರಿಯಲ್ಲಿ ರಾಜ್ಯದಲ್ಲಿ ನೌಕರರ ಸುರಕ್ಷತೆ ದೃಷ್ಟಿಯಿಂದ ರೊಟೇಷನ್ ಪದ್ದತಿ ಜಾರಿಗೆ ತರುವ ನಿರೀಕ್ಷೆ ಇದೆ. ಈ ಆದೇಶ ಹೊರಬಿದ್ದರೆ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಇಲಾಖಾ ಮುಖ್ಯಸ್ಥರು ಹಾಗೂ ಶೇ. 50 ಹಾಗೂ ಶೇ. 33 ಅನುಪಾತ ಅನುಸರಿಸಿ ನೌಕರರು ಕಚೇರಿಗೆ ರೋಟೇಷನ್ ಆಧಾರಾದ ಮೇಲೆ ಹಾಜರಾಗಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಗರ್ಭಿಣಿ ಇರುವ ಮಹಿಳಾ ನೌಕರರಿಗೆ ಹಾಗೂ 55 ವರ್ಷ ವಯೋಮಿತಿ ಮೀರಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರಿಗೆ ಹಾಜರಾತಿಯಿಂದ ವಿನಾಯಿತಿ ನೀಡಿ ಮನೆಯಿಂದಲೇ ಕರ್ತವ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಷಡಕ್ಷರಿ ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ ಶೀಘ್ರ ಆದೇಶ ಹೊರಬೀಳುವ ನಿರೀಕ್ಷೆ ಇದೆ. ಶಿಕ್ಷಕರ ಕಡ್ಡಾಯ, ಹೆಚ್ಚುವರಿ ವರ್ಗಾವಣೆ ಸಂಬಂಧ ಚರ್ಚಿಸಿ ಶೀಘ್ರ ಈ ವರ್ಗಾವಣೆ ಕಾರ್ಯ ಮುಗಿಸಲು ಸುಗ್ರೀವಾಜ್ಞೆ ತರುವ ನಿಟ್ಟಿನಲ್ಲಿ ಏ. 19 ರಂದು ಸಚಿವ ಸಂಪುಟದಲ್ಲಿ ಚರ್ಚೆಗೆ ಬರುವುದಿತ್ತು. ಆದರೆ ಮುಖ್ಯಮಂತ್ರಿಗಳು ಕೋವಿಡ್‌ಗೆ ತುತ್ತಾಗಿರುವುದರಿಂದ ಇದು ವಿಳಂಬವಾಗಿದೆ ಎಂದು ಸಭೆಯಲ್ಲಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಜಿಲ್ಲಾ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಲು ಜಂಟಿ ಸಮಾಲೋಚನಾ ಸಮಿತಿ ಸಭೆ ಕರೆಯುವಂತೆ ತಮ್ಮ ತಮ್ಮ ಜಿಲ್ಲಾ ಕಾರಿಗಳಿಗೆ ಮನವಿ ಮಾಡಲು ಸೂಚಿಸಿದ್ದಾರೆ ಎಂದು ಮಂಜುನಾಥ್ ತಿಳಿಸಿದ್ದಾರೆ.