Advertisement

ಕಾಯಕ ಮಹತ್ವ ಸಾರಿದ ದಾರ್ಶನಿಕ

05:27 PM Apr 18, 2021 | Team Udayavani |

ಚಿತ್ರದುರ್ಗ: ಕಾಯಕದಲ್ಲಿ ದೇವರನ್ನು ಕಂಡು, ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಕಳಕಳಿಯಿಂದ ಉತ್ತಮ ಜೀವನ ನಡೆಸಬಹುದು ಎನ್ನುವುದನ್ನು ಆದ್ಯ ವಚನಕಾರ ದೇವರ ದಾಸಿಮಯ್ಯ ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ ಎಂದು ಜಿಲ್ಲಾ ಕಾರಿ ಕವಿತಾ ಎಸ್‌. ಮನ್ನಿಕೇರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಕುಲದ ಒಳತಿಗಾಗಿ ಸರಳ ಭಾಷೆಯಲ್ಲಿ ಜನರಿಗೆ ಅರ್ಥವಾಗುವಂತೆ ವಚನಗಳನ್ನು ರಚಿಸಿದ್ದಾರೆ. ಕಾಯಕ ನಿಷ್ಠೆ ಉಳ್ಳವರಾಗಿದ್ದ ದೇವರ ದಾಸಿಮಯ್ಯ ಕಾಯಕದಿಂದ ಬದುಕು ಸಾಗಿಸಬೇಕು ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

2011-12ರಿಂದ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಮೊಟ್ಟ ಮೊದಲ ಬಾರಿಗೆ ದೇವರ ದಾಸಿಮಯ್ಯ ಅವರ ಹುಟ್ಟೂರಾದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಜಯಂತಿ ಆಚರಿಸಲಾಯಿತು. ದೇವರ ದಾಸಿಮಯ್ಯ ಅವರು ಆದ್ಯ ವಚನಕಾರರಾಗಿದ್ದು, ಬಸವಣ್ಣನವರಿಗಿಂತ ಪೂರ್ವದ ವಚನಕಾರರಾಗಿದ್ದಾರೆ. ರಾಮನಾಥ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಅಪರ ಜಿಲ್ಲಾ ಧಿಕಾರಿ ಈ. ಬಾಲಕೃಷ್ಣ ಮಾತನಾಡಿ, ದೇವರ ದಾಸಿಮಯ್ಯ ಅವರು 11ನೇ ಶತಮಾನದ ಮೊಟ್ಟ ಮೊದಲ ವಚನಕಾರರು. ದೇವರ ದಾಸಿಮಯ್ಯ ನೇಕಾರ ವೃತ್ತಿಯ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ. ಕಾಯಕ ವೃತ್ತಿ ಹಾಗೂ ಕಾಯಕ ಶ್ರೇಷ್ಠತೆಯನ್ನು ತಮ್ಮ ವಚನಗಳ ಮೂಲಕ ಸಾರಿದ್ದಾರೆ. ತಮ್ಮ ಕಾಯಕದಲ್ಲಿಯೇ ಶ್ರದ್ಧೆಯಿಂದ ಕೆಲಸ ಮಾಡಿದರೆ ದೇವರನ್ನು ಕಾಣಬಹುದು. ಕಪಟ ಭಕ್ತಿ ಮತ್ತು ತೋರ್ಪಡಿಕೆ ಭಕ್ತಿ ತೋರದೇ ನಿಷ್ಠೆಯಿಂದ ಕಾಯಕ ಮಾಡಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ವಚನಗಳಲ್ಲಿ ತಿಳಿಸಿದ್ದಾರೆ ಎಂದರು.

ಜಿಲ್ಲಾ ವಾರ್ತಾಧಿ ಕಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಧನಂಜಯ ಮಾತನಾಡಿ, ಬಂಡಿಗೆ ಕೀಲು ಎಷ್ಟು ಮುಖ್ಯವೋ ಜೀವನಕ್ಕೂ ವಚನಗಳು ಅಷ್ಟೇ ಮುಖ್ಯವಾಗಿವೆ. ಸಮಾಜಕ್ಕೆ ಆದರ್ಶ, ಸಿದ್ಧಾಂತ, ಅಡಿಪಾಯವನ್ನು ಹಾಕಿಕೊಟ್ಟ ವಚನಕಾರರನ್ನು ಸ್ಮರಿಸುತ್ತಾ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ನೇಕಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್‌, ಕಾರ್ಯದರ್ಶಿ ಎನ್‌. ಆರ್‌. ಶಶಿಧರ, ಉಪಾಧ್ಯಕ್ಷರಾದ ನಾರಾಯಣ್‌ ದೊಡ್ಡಸಿದ್ದವ್ವನಹಳ್ಳಿ, ಎಚ್‌. ತಿಪ್ಪೇಸ್ವಾಮಿ, ಶಕಾಂಬರಿ ಮಹಿಳಾ ಸಂಘದ ಪದಾ ಧಿಕಾರಿಗಳಾದ ಎಚ್‌. ಮಮತಾ, ಟಿ. ಶಿವರುದ್ರಮ್ಮ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next