ಚಳ್ಳಕೆರೆ: ತಾಲೂಕಿನ ಒಟ್ಟು 40 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯಡಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ನಿಯಮಾನುಸಾರ ಸೌಲಭ್ಯಗಳನ್ನು ವಿತರಣೆ ಮಾಡಬೇಕಿದೆ. ಅದಕ್ಕಾಗಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅನಂತರಾಜ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ತಾಪಂ ಕಾರ್ಯಾಲಯದಲ್ಲಿ ಗುರುವಾರ ನಡೆಯಿತು.
ತಾಪಂ ಇಒ ಅನಂತರಾಜ್ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ರೇಷ್ಮೆ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಸಣ್ಣ ಕೈಗಾರಿಕೆ, ಶಿಕ್ಷಣ ಮುಂತಾದ ಇಲಾಖೆಗಳ ವ್ಯಾಪ್ತಿಯ ತಾಲೂಕು ಮಟ್ಟದ ಅಧಿ ಕಾರಿಗಳು ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಬೇಕು. ಅವುಗಳ ಪರಿಶೀಲನೆ ನಡೆಸಿ ಯೋಗ್ಯ ಫಲಾನುಭವಿಯನ್ನು ಗುರುತಿಸಿ ವರದಿ ಸಲ್ಲಿಸಿ ಮಂಜೂರಾತಿ ಪಡೆದು ಫಲಾನುಭವಿಗಳಿಗೆ ನೀಡಬೇಕು ಎಂದರು.
ವಿಶೇಷವಾಗಿ ತೋಟಗಾರಿಕೆ ಇಲಾಖೆಯ ಈರುಳ್ಳಿ ಶೆಡ್ ನಿರ್ಮಾಣ, ರೇಷ್ಮ ಇಲಾಖೆಯ ರೇಷ್ಮಗೂಡು ಮತ್ತು ಶೆಡ್ ನಿರ್ಮಾಣಕ್ಕೆ ಶೇ. 90ರಷ್ಟು ಸಬ್ಸಿಡಿ ಪಡೆಯಬಹುದಾಗಿದೆ. ಸಣ್ಣ ಕೈಗಾರಿಕೆ ಇಲಾಖೆ ಯೋಜನೆಯಡಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಸಹ ವಿತರಿಸುವ ಅಕಾಶವಿದೆ. ನಗರಸಭೆ ವ್ಯಾಪ್ತಿಯಲ್ಲಿ ಶೇ. 24 ರಷ್ಟು ಹಣವನ್ನು ವಿವಿಧ ಯೋಜನೆಗಳಡಿ ವೆಚ್ಚ ಮಾಡಲು ಅವಕಾಶವಿದೆ. ಅರಣ್ಯ ಇಲಾಖೆ ವತಿಯಿಂದ ಸದರಿ ಯೋಜನೆಯಡಿ ಈಗಾಗಲೇ ಪರಿಶಿಷ್ಟ ಜಾತಿಯ 364, ಪರಿಶಿಷ್ಟ ಪಂಗಡದ 672 ಒಟ್ಟು 1036 ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್‌ಗಳನ್ನು ಈಗಾಗಲೇ ವಿತರಣೆ ಮಾಡಲಾಗಿದೆ. ವಿಶೇಷವಾಗಿ ಶಿಕ್ಷಣ ಇಲಾಖೆಯಲ್ಲಿ ಆರ್‌ಟಿಐ ಯೋಜನೆಯಡಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಶುಲ್ಕ ವಸೂಲಿ ಮಾಡಬಾರದು. ಶೇ. 25ರಷ್ಟು ಸೀಟುಗಳನ್ನು ಎಸ್‌ಸಿ-ಎಸ್‌ಟಿ ವರ್ಗದ ಮಕ್ಕಳಿಗೆ ಮೀಸಲಿರಿಸುವಂತೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ ಸೂಚಿಸಿದರು. ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಒಟ್ಟು 32 ಇಲಾಖೆಗಳು ಕಾರ್ಯ ನಿರ್ವಹಿಸಬೇಕಿದೆ.
ಇಂದಿನ ಸಭೆಯಲ್ಲಿ ಕೇವಲ 19 ಇಲಾಖೆ ಅ ಧಿಕಾರಿಗಳು ಮಾತ್ರ ಹಾಜರಿದ್ದೀರಿ. ಮುಂದಿನ ಸಭೆಯಲ್ಲಿ ಉಳಿದ ಎಲ್ಲಾ ಇಲಾಖೆ ಅ ಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗಬೇಕು ಎಂದರು. ಸಭೆಯಲ್ಲಿ ಸಮಾಜಕಲ್ಯಾಣ ಇಲಾಖೆ ಅಧಿ ಕಾರಿ ಜಿ.ಆರ್. ಮಂಜಪ್ಪ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ಕೃಷಿ ಇಲಾಖೆಯ ಅಶೋಕ್ ಮುಂತಾದವರು ಭಾಗವಹಿಸಿದ್ದರು.