ಚಿತ್ರದುರ್ಗ: ಬಹಳಷ್ಟು ಜಿಲ್ಲೆಗಳಲ್ಲಿ ಕೊರೊನಾ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ನಮ್ಮ ಜಿಲ್ಲೆಯನ್ನು ನಾವು ಕೋವಿಡ್‌ನಿಂದ ರಕ್ಷಿಸಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಗುಂಪು ಸೇರದಂತೆ ಜಾಗ್ರತೆ ವಹಿಸಬೇಕು. 45 ವರ್ಷ ಮೇಲ್ಪಟ್ಟವರು ವ್ಯಾಕ್ಸಿನ್ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಹೇಳಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಕೇಂದ್ರ ಮತ್ತು ಸಂತ ಜೋಸೆಫ್ ಶಾಲೆ ಸಹಯೋಗದಲ್ಲಿ ಆಯೋಜಿಸಿದ್ದ ಹೆಲ್ಮೆಟ್ ಮತ್ತು ಮಾಸ್ಕ್ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳು 18 ವರ್ಷ ಪೂರ್ತಿಯಾಗುವವರೆಗೆ ಯಾವುದೇ ಮೋಟಾರ್ ಸೈಕಲ್ ಓಡಿಸಬಾರದು. 18 ತುಂಬಿದ ನಂತರ ಚಾಲನೆಯನ್ನು ಸರಿಯಾಗಿ ಕಲಿತು ಅದಕ್ಕೆ ಪರವಾನಗಿ ಪಡೆದು ವಿಮೆ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಇಟ್ಟುಕೊಂಡು ವಾಹನ ಚಲಾಯಿಸಬೇಕು. ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಪಘಾತದಲ್ಲಿ ಕೈಕಾಲು ಮುರಿದರೆ ಸರಿಪಡಿಸಬಹುದು. ಆದರೆ ತಲೆಗೆ ಪೆಟ್ಟು ಬಿದ್ದರೆ ಬದುಕುವುದು ಕಷ್ಟ. ಆದ್ದರಿಂದ ಹೆಲ್ಮೆಟ್ ಧರಿಸಿ ಸುರಕ್ಷಿತವಾಗಿರಿ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ| ಎಚ್.ಕೆ.ಎಸ್. ಸ್ವಾಮಿ ಮಾತನಾಡಿ, ಹೆಣ್ಣುಮಕ್ಕಳಿಗೆ ಹೆಚ್ಚು ಆತ್ಮ ಬಲವಿರುತ್ತದೆ. ಧೈರ್ಯಶಾಲಿಗಳಾಗಿ, ಸ್ವಂತ ಅನುಭವಗಳನ್ನು ಹೊಂದಿ, ಸಮಾಜದ ಸುಧಾರಣೆಗೆ ಸಹಾಯ ಮಾಡಬೇಕು. ಮಕ್ಕಳಿದ್ದಾಗಲೇ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ದೊಡ್ಡವರು ತಪ್ಪು ಮಾಡಿದಾಗ ಅವರನ್ನು ತಿದ್ದಿ ಸರಿ ದಾರಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಕ್ಕಳು ಮಾಡಬಹುದು. ಪೋಷಕರು ಹೆಲ್ಮೆಟ್, ಮಾಸ್ಕ್ ಧರಿಸದೇ ಓಡಾಡುತ್ತಿದ್ದರೆ ಮಕ್ಕಳು ಮನೆಯಲ್ಲೇ ಅವರನ್ನು ತಡೆದು ತಿಳಿಸಬೇಕು. ಇದರಿಂದ ಪೋಷಕರ ಮನಃಪರಿವರ್ತನೆಯಾಗುತ್ತದೆ ಎಂದು ತಿಳಿಸಿದರು.
ಸಂತ ಜೋಸೆಫರ ಶಾಲೆ ಪ್ರಾಚಾರ್ಯರಾದ ರೆಜಿ ಸಿಸ್ಟರ್, ಬಾಲಮೇರಿ ಸಿಸ್ಟರ್, ಶಿಕ್ಷಕರಾದ ರೂಪ, ವಿಜ್ಞಾನ ಸಮಿತಿ ಉಪಾಧ್ಯಕ್ಷ ಜಯದೇವಮೂರ್ತಿ ಮತ್ತಿತರರು ಇದ್ದರು.
ವಿದ್ಯಾರ್ಥಿನಿಯರಾದ ಎಚ್.ಎಸ್. ರಚನಾ, ಎಚ್.ಎಸ್. ಪ್ರೇರಣಾ ಕೋವಿಡ್ ಜಾಗೃತಿ ಗೀತೆ ಹಾಡಿದರು. ಬಿ.ಬಿ. ಅವನಿ, ಅಜೀರಾ, ಅನು ಪಿಪಿಇ ಕಿಟ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಹೂಗುತ್ಛ ನೀಡಿದರು.