ಚಳ್ಳಕೆರೆ: ಪ್ರಸ್ತುತ ಸನ್ನಿವೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಸಾಧನೆ ಮಾಡಬೇಕಾದ ಅನಿರ್ವಾಯತೆ ಇದೆ. ಶಿಕ್ಷಣದಿಂದ ಮಾತ್ರ ನಮ್ಮ ಭವಿಷ್ಯದ ಬದುಕು ಭದ್ರಪಡಿಸಲು ಸಾಧ್ಯ. ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಅಭ್ಯಾಸ ಮಾಡುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆ ಸವಾಲಾಗಿ ಪರಿಣಮಿಸಿದ್ದು, ಇಂತಹ ಸವಾಲನ್ನು ಸುಲಭವಾಗಿ ಎದುರಿಸಲುಸ್ಮಾರ್ಟ್ ಕ್ಲಾಸ್ ಸಹಕಾರಿ ಎಂದು ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ತಾಲೂಕಿನ ಹಿರೇಹಳ್ಳಿಯ ಶ್ರೀ ಚಿಂತಾಮಣೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಟಾಟಾ ಸೋಲಾರ್ ಪವರ್ ಕಂಪನಿ ಸಹಯೋಗದಲ್ಲಿ ಎಸ್‌ಎಸ್ ಎಲ್‌ಸಿ ವಿದ್ಯಾರ್ಥಿಗಳಿಗೆ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್‌ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ನಗರ ಪ್ರದೇಶದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯವಿದ್ದು ಯಾವುದೇ ಕೊರತೆ ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗದು. ಅದೇ ರೀತಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಸಹ ಉತ್ತಮ ಅಂಕ ಪಡೆದು ಸಾಧನೆಯತ್ತ ದೃಢ ಹೆಜ್ಜೆ ಇಡಲು ಸೋಲಾರ್ ಪವರ್ ಕಂಪನಿ ನಿಮಗೆ ಈ ಸೌಲಭ್ಯ ಕಲ್ಪಿಸಿದೆ. ಪೂರ್ಣಪ್ರಮಾಣದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿ ಕಾರಿ ಕೆ.ಎಸ್. ಸುರೇಶ್, ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ತಮ್ಮ ಪರೀಕ್ಷೆಗಳ ಬಗ್ಗೆ ಆತಂಕ ಉಂಟಾಗುವುದು ಸಹಜ. ಆದರೆ ಶಿಕ್ಷಣ ಇಲಾಖೆ ಕೋವಿಡ್ ನಿಯಮಗಳ ಅನುಸಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಿಗ ದಿತ ಅವ ಧಿಯಲ್ಲೇ ನಡೆಸಲಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ ಎಂದರು.
ಟಾಟಾ ಸೋಲಾರ್ ಕಂಪನಿಯ ವಿ.ಎಸ್. ಜ್ಞಾನೇಶ್ವರ್ ಮಾತನಾಡಿ, ನಮ್ಮ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿದೆ. ಮುಂಬರುವ ವರ್ಷಗಳಲ್ಲಿ ತಾಲೂಕಿನ ಇನ್ನೂ ಕೆಲವು ಗ್ರಾಮಗಳ ಪ್ರೌಢಶಾಲೆಗಳಿಗೆ ಈ ಸೌಲಭ್ಯವನ್ನು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ವಹಿಸಿದ್ದರು.
ಉಪಾಧ್ಯಕ್ಷ ಮಲ್ಲಿಕಾರ್ಜುನ್, ಸೋಲಾರ್ ಕಂಪನಿಯ ಅ ಧಿಕಾರಿಗಳಾದ ಸ್ವಾಮಿ ನಾಯಕ, ರಮಣ ಗೌಡ, ಶಿವಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಂ. ಜಗದೀಶ್, ಉಪಾಧ್ಯಕ್ಷ ವೀರಭದ್ರಪ್ಪ, ನಿರ್ದೇಶಕರಾದ ರುದ್ರಮುನಿ, ತಿಪ್ಪೇಸ್ವಾಮಿ, ಒ. ರವಿ, ಬಿ. ತಿಪ್ಪೇಸ್ವಾಮಿ, ಆರ್.ಟಿ. ಬಸವರಾಜು, ಮುಖ್ಯ ಶಿಕ್ಷಕ ಡಿ.ಟಿ. ಶ್ರೀನಿವಾಸ್, ಶಿಕ್ಷಕರಾದ ಎಚ್.ಕೆ. ರಶ್ಮಿ, ಟಿ. ಲೋಕೇಶ್ ಮತ್ತಿತರರು ಭಾಗವಹಿದ್ದರು.