ಚಿತ್ರದುರ್ಗ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಪರಿಣಾಮ ಖಾಸಗಿ ಬಸ್‌ಗಳು ಹಾಗೂ ಕ್ರೂಸರ್, ಕ್ಯಾಬ್ ಮತ್ತಿತರೆ ವಾಹನಗಳು ನಗರದ ಕೆಎಸ್ ಆರ್‌ಸಿಟಿ ಬಸ್ ನಿಲ್ದಾಣದಲ್ಲಿ ರಾಜಾರೋಷವಾಗಿ ಓಡಾಡಿದವು. ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಪಟ್ಟುಹಿಡಿದು ಎರಡನೇ ದಿನವೂ ಮುಷ್ಕರ ಮುಂದುವರೆಸಿದ ನೌಕರರು, ಕರ್ತವ್ಯಕ್ಕೆ ಗೆ„ರು ಹಾಜರಾಗಿ ಸರ್ಕಾರಕ್ಕೆ ಸವಾಲೆಸೆದರು.
ಈ ನಿಟ್ಟಿನಲ್ಲಿ ಸರ್ಕಾರಿ ಸರ್ಕಾರಿ ಸಾರಿಗೆಗೆ ಬದಲಾಗಿ ಖಾಸಗಿ ಸಾರಿಗೆ ಬಳಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಖಾಸಗಿ ವಾಹನಗಳು ಸೇವೆ ಒದಗಿಸಿದವು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ವ್ಯಾಪ್ತಿಯ 294 ಬಸ್‌ಗಳಲ್ಲಿ ಒಂದು ಬಸ್ ಮಾತ್ರ ಪೊಲೀಸ್ ಭದ್ರತೆಯಲ್ಲಿ ಗುರುವಾರ ಬೆಳಿಗ್ಗೆ ಚಳ್ಳಕೆರೆಗೆ ಸಂಚರಿಸಿತು.
ಇದರಿಂದ ನಿಧಾನವಾಗಿ ಒಂದೊಂದೇ ಬಸ್ ಸಂಚಾರ ಆರಂಭಿಸುವ ನಿರೀಕ್ಷೆ ಆರಂಭವಾಗಿತ್ತು. ಆದರೆ 1,250 ನೌಕರರಲ್ಲಿ ಅಧಿಕಾರಿ ಹಂತದವರನ್ನು ಹೊರತುಪಡಿಸಿ ಚಾಲಕರು, ನಿರ್ವಾಹಕರು ಗೈರುಹಾಜರಾಗಿದ್ದರಿಂದ ಈ ನಿರೀಕ್ಷೆ ಹುಸಿಯಾಯಿತು. ಬೆಂಗಳೂರು, ದಾವಣಗೆರೆ, ಹಿರಿಯೂರು, ಹೊಳಲ್ಕೆರೆ, ಭರಮಸಾಗರ ಸೇರಿ ಹಲವು ಊರುಗಳಿಗೆ ಖಾಸಗಿ ಬಸ್ ಸೇವೆ ಸಮರ್ಪಕವಾಗಿದೆ. ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ನಿಲುಗಡೆ ಮಾಡುತ್ತಿದ್ದ ಸ್ಥಳದಲ್ಲಿಯೇ ಖಾಸಗಿ ಬಸ್‌ಗಳು ನಿಲ್ಲುತ್ತಿವೆ. ಮತ್ತೂಂದು ಬದಿಗೆ ಕ್ರೂಸರ್ ಹಾಗೂ ಇತರೆ ಪ್ರವಾಸಿ ವಾಹನಗಳು ಸೇವೆಗೆ ಸಜ್ಜಾಗಿದ್ದವು. ಸೀಟುಗಳು ಭರ್ತಿಯಾಗುವ ವರೆಗೆ ಕಾಯುತ್ತಿದ್ದ ಚಾಲಕರು ನಂತರ ಪ್ರಯಾಣ ಬೆಳೆಸುತ್ತಿದ್ದರು. ವರ್ಷದಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಕಾರಣಕ್ಕೆ ಸರ್ಕಾರ ಖಾಸಗಿ ಬಸ್‌ಗಳ ಸೇವೆ ಬಳಸಿಕೊಳ್ಳಲು ಸೂಚನೆ ನೀಡಿದ ಪರಿಣಾಮ ಪ್ರಾದೇಶಿಕ ಸಾರಿಗೆ ಅ ಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಬಸ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬೀದಿಗಿಳಿದಿವೆ.
ತೆರಿಗೆ ಪಾವತಿಸಲು ಸಾಧ್ಯವಾಗದೇ ವರ್ಷದಿಂದ ನಿಲುಗಡೆ ಮಾಡಿದ್ದ ಬಸ್‌ಗಳು ಕೂಡ ಸಂಚಾರ ಆರಂಭಿಸಿದವು. ಹೀಗಾಗಿ ಖಾಸಗಿ ಬಸ್ ನಿಲ್ದಾಣದಲ್ಲಿ ಎಂದಿಗಿಂತಲೂ ಹೆಚ್ಚಿನ ಬಸ್‌ಗಳು ಕಾಣುತ್ತಿದ್ದವು. ಮುಷ್ಕರ ಕಾರಣಕ್ಕೆ ಸಾರ್ವಜನಿಕರು ಬಸ್ ಸೇವೆ ಪಡೆದಿದ್ದು ಕಡಿಮೆ. ಅನಿವಾರ್ಯ ಕಾರಣಕ್ಕೆ ಕೆಲವರು ಪ್ರಯಾಣ ಮಾಡಿದರು.
ಶಿವಮೊಗ್ಗ, ಬೆಂಗಳೂರಿಗೆ ತೆರಳುವ ಬಸ್‌ಗಳು ಭರ್ತಿಯಾಗುವುದು ಅಪರೂಪವಾಗಿತ್ತು. ದಾವಣಗೆರೆ, ಜಗಳೂರು, ಹಿರಿಯೂರು ಮಾರ್ಗವಾಗಿ ಸಾಗುವ ಬಸ್ ಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಕಾಲೇಜು ವಿದ್ಯಾರ್ಥಿಗಳು ಬಸ್‌ಗಳಿಗೆ ಕಾದು ಕುಳಿತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂದಿತು.
ದರ ಹೆಚ್ಚಳದ ಹೊರೆ ಎಂದ ಪ್ರಯಾಣಿಕ: ಸಾರಿಗೆ ನೌಕರರ ಮುಷ್ಕರವನ್ನು ನೆಪ ಮಾಡಿಕೊಂಡ ಕೆಲ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಹೆಚ್ಚಿಸಿವೆ. ಕನಿಷ್ಠ 10 ರೂ.ಗಳಿಂದ 100 ರೂಪಾಯಿವರೆಗೆ ಪ್ರಯಾಣ ದರ ನಿಗ ದಿ ಮಾಡಿಕೊಂಡಿದ್ದಾರೆ ಎಂದು ಕೆಲ ಪ್ರಯಾಣಿಕರು ದೂರಿದರು. ದಾವಣಗೆರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮಾರ್ಗ ಮಧ್ಯದ ಚಿತ್ರದುರ್ಗಕ್ಕೂ ಸೇವೆ ನೀಡಿತು. ನಿಗದಿತ 70 ರೂ. ಬದಲಿಗೆ 80 ರೂ. ಪಡೆಯಲಾಗಿದೆ. ಬಸ್ ನಿರ್ವಾಹಕರ ಈ ಕ್ರಮವನ್ನು ಕೆಲ ಪ್ರಯಾಣಿಕರು ಪ್ರಶ್ನಿಸಿದರು.
ಸಾರಿಗೆ ಇಲಾಖೆ ಅ ಧಿಕಾರಿಗಳು ಮಧ್ಯಪ್ರವೇಶಿಸಿ ದರ ಹೆಚ್ಚಿಸದಂತೆ ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಕನಿಷ್ಠ 247 ರೂ.ದಿಂದ 491 ರೂ.ವರೆಗೆ ಟಿಕೆಟ್ ದರವಿದೆ. ಸಾಮಾನ್ಯ ಬಸ್‌ಗಳ ಪ್ರಯಾಣ ದರ ಜನರ ಕೈಗೆಟುಕುವಂತಿದೆ. ಆದರೆ ಖಾಸಗಿ ಬಸ್‌ಗಳು 400 ರೂ. ನಿಗದಿ ಮಾಡಿವೆ. ಈ ಬಗ್ಗೆ ಅನೇಕ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.