ಚಳ್ಳಕೆರೆ: ಜನಸಂಘದ ಹಿರಿಯ ನಾಯಕರಾದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ, ಶ್ಯಾಮಪ್ರಕಾಶ್ ಮುಖರ್ಜಿ ಅವರಂತಹ ಅತಿ ಶ್ರೇಷ್ಠ ನಾಯಕರು ಸ್ಥಾಪಿಸಿದ ಜನಸಂಘ ಈಗ ಭಾರತೀಯ ಜನತಾ ಪಕ್ಷವಾಗಿದೆ. ತನ್ನದೇ ಆದ ಮೌಲ್ಯ, ಸಿದ್ಧಾಂತಗಳಿಂದ ವಿಶ್ವದ ಗಮನ ಸೆಳೆದಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ 41ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ವಿಜಯ ಸಾಧಿ ಸುವ ಮೂಲಕ ಇಂದು ಎಲ್ಲರ ಮೆಚ್ಚಿನ ಪಕ್ಷವಾಗಿ ಹೊರಹೊಮ್ಮಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಸಿ.ಬಿ. ಆದಿಭಾಸ್ಕರ ಶೆಟ್ಟಿ, 1981ರಲ್ಲಿ ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯನ್ನು ಚಳ್ಳಕೆರೆಯಲ್ಲಿ ಆಚರಣೆ ಮಾಡಲಾಯಿತು. ಇಡೀ ಜಿಲ್ಲೆಯಲ್ಲಿ ಸಂಸ್ಥಾಪನ ದಿನ ಆಚರಿಸಿದ ಹೆಗ್ಗಳಿಕೆ ಚಳ್ಳಕೆರೆ ಭಾರತೀಯ ಜನತಾ ಪಕ್ಷದ್ದು. ಅಂದು ಕೇವಲ 5 ಜನರಿದ್ದ ಬಿಜೆಪಿ, ಈಗ ಚಳ್ಳಕೆರೆಯಲ್ಲಿ ಲಕ್ಷಾಂತರ ಅಭಿಮಾನಿಗಳು, ಸಾವಿರಾರು ಮುಖಂಡರನ್ನು ಹೊಂದಿದೆ ಎಂದು ನೆನಪಿಸಿಕೊಂಡರು.
ಸಂಸ್ಥಾಪನ ದಿನಾಚರಣೆಯನ್ನುದ್ದೇಶಿಸಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್, ರೈತ ಮೋರ್ಚಾ ಅಧ್ಯಕ್ಷ ನವೀನ್‌ಕುಮಾರ್, ಎಂ.ಎಸ್. ಜಯರಾಮ್, ಕಾಂತರಾಜು, ಬಿ.ಎಸ್.ಶಿವಪುತ್ರಪ್ಪ, ದಿನೇಶ್ ರೆಡ್ಡಿ, ಸಿ.ಎಸ್.ಪ್ರಸಾದ್, ಡಿ.ಎಂ. ತಿಪ್ಪೇಸ್ವಾಮಿ, ಎಂ. ಶಿವಮೂರ್ತಿ, ತಿಮ್ಮಣ್ಣ, ದೇವರಾಜ ರೆಡ್ಡಿ ಮುಂತಾದವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಮಾತನಾಡಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರತೀಯ ಜನತಾ ಪಕ್ಷ ಹೆಚ್ಚು ಸಂಘಟನೆ ಹೊಂದಿದೆ. ಕ್ಷೇತ್ರದ ಜ್ವಲಂತ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿದ ಸರ್ಕಾರ ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸುವ ಮೂಲಕ ಶಾಶ್ವತ ಪರಿಹಾರವನ್ನು ನೀಡಿದೆ. ನಗರದ ಅಭಿವೃದ್ಧಿಗೂ ಹೆಚ್ಚು ಆದ್ಯತೆ ನೀಡುತ್ತಿದ್ದು, ಯುಜಿಡಿ ಕಾಮಗಾರಿಗೆ 197 ಕೋಟಿ ರೂ. ನೀಡಿದೆ. ಪಕ್ಷದ ಕಾರ್ಯಕರ್ತರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.