ಹಿರಿಯೂರು: ವಾಣಿವಿಲಾಸ ಸಾಗರ ಜಲಾಶಯದ ನೀರನ್ನು ವೇದಾವತಿ ನದಿಗೆ ಹರಿಸಲು ಮಾಡಿರುವ ಆದೇಶವನ್ನು ಪುನರ್ ಪರಿಶೀಲಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ವಾಣಿವಿಲಾಸ ಸಾಗರ ಜಲಾಶಯವಾಗಿ ಉಳಿಯದೆ ಕೇವಲ ಕುಡಿಯುವ ನೀರಿನ ಕಟ್ಟೆಯಾಗಬಹುದು ಎಂದು ವಾಣಿವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ಆತಂಕ ವ್ಯಕ್ತಪಡಿಸಿದರು.
ವಾಣಿವಿಲಾಸ ಸಾಗರದ ಜಲಾಶಯದ ನೀರನ್ನು ವೇದಾವತಿ ನದಿಗೆ ಹರಿಸಲು ಮಾಡಿರುವ ಆದೇಶವನ್ನು ಪುನರ್ ಪರಿಶೀಲಿಸುವಂತೆ ಒತ್ತಾಯಿಸಿ ವಾಣಿವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ವಾಣಿವಿಲಾಸ ಸಾಗರ ಜಲಾಶಯದಿಂದ ಈಗಾಗಲೇ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುತ್ತಿರುವ ನೀರು ವೇದಾವತಿ ಮುಖಾಂತರ ಸುಮಾರು 30 ಕಿಲೋಮೀಟರ್ ಹರಿದಿದೆ.
ಏಪ್ರಿಲ್ 14ರ ತನಕ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿದರೆ ಅದು ಬಹುಶಃ ತಾಲೂಕಿನ ಗಡಿ ಭಾಗದ ಶಿಡ್ಲಯ್ಯನಕೋಟೆ ತಲುಪಬಹುದು. ವಾಣಿವಿಲಾಸ ಸಾಗರದಿಂದ ಹರಿಯುವ ನೀರಿನ ಲೆಕ್ಕ ತೆಗೆದುಕೊಳ್ಳುವುದಿಲ್ಲ. ಅಲ್ಲದೆ ಶಿಡ್ಲಯ್ಯನಕೋಟೆ ಬಳಿ ಇರುವ ಬ್ಯಾರೇಜ್ ಬಳಿಯಲ್ಲಿಯೂ ಅಳತೆ ಮಾಪನ ಮಾಡುವುದಿಲ್ಲ ಎಂಬುದು ಕಳೆದ ಬಾರಿ ಸಾಬೀತಾಗಿದೆ ಎಂದರು.
ಕಳೆದ ಬಾರಿ ಮೊದಲು 0.25 ಟಿಎಂಸಿ ಎಂದು ಹೇಳಿ ನಂತರ 0.25ಗೆ ಬದಲಾಯಿಸಲಾಯಿತು. ಕೊನೆಗೆ 2.12 ಟಿಎಂಸಿ ನೀರನ್ನು ಅವೈಜ್ಞಾನಿಕವಾಗಿ ಹರಿಸಿ ಆ ನೀರು ಕೊನೆಗೆ ಆಂಧ್ರಪ್ರದೇಶದ ಪಾಲಾಯಿತು. ವಾಣಿವಿಲಾಸ ಸಾಗರ ಜಲಾಶಯದಲ್ಲಿ 105 ಅಡಿ ಮೇಲ್ಪಟ್ಟು ನೀರು ಇದ್ದರೆ ಪಕ್ಕದ ಚಳ್ಳಕೆರೆ, ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಚಿಕ್ಕನಾಯಕನಹಳ್ಳಿ, ಶಿರಾ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕಳೆದ ಬಾರಿಯಂತೆ ಈ ಬಾರಿಯೂ ನೀರು ಪೋಲಾದರೆ ವಲಸೆ ಹೋಗಿದ್ದ ತಾಲೂಕಿನ ಜನತೆ ಜಲಾಶಯದಲ್ಲಿ ನೀರಿದೆ ಎಂದು ತಿಳಿದು ವಾಪಸ್ ಹಳ್ಳಿಗೆ ಬಂದು ತೆಂಗು, ಅಡಿಕೆ ಬೆಳೆಸಿ ಹೈನುಗಾರಿಕೆ ಪಶುಪಾಲನೆ ಮಾಡುತ್ತಿದ್ದಾರೆ. ಈ ರೀತಿ ನೀರಿನ ಮಟ್ಟ ಕಡಿಮೆಯಾದರೆ ಅವರ ಗತಿಯೇನು, ಈಗಾಗಲೇ ಬೆಳೆದು ನಿಂತಿರುವ ಫಸಲುಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದೇ ಚಿಂತೆಯಾಗಿದೆ. ಆದ್ದರಿಂದ ವಾಣಿವಿಲಾಸ ಸಾಗರ ಜಲಾಶಯವನ್ನು ತುಂಬಿಸುವ ಮೂಲಕ ಅಂತರ್ಜಲ ಸಂರಕ್ಷಣೆ ಮಾಡಬೇಕು. ನಂತರ ಬೇರೆ ಕಡೆಗೆ ಹಂಚಿಕೆ ಮಾಡುವವರೆಗೂ ಈ ಆದೇಶವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಾಣಿವಿಲಾಸ ಸಾಗರ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ನಿರ್ದೇಶಕ ಸಿ.ಎನ್.ಸಿ. ನಾರಾಯಣಾಚಾರ್ ಮತ್ತಿತರರು ಇದ್ದರು.