ಚಿತ್ರದುರ್ಗ: ಭೋವಿ ಸಮುದಾಯವೆಂದರೆ ಅನಕ್ಷರಸ್ಥ ಸಮಾಜ ಎನ್ನುವುದು ಇತಿಹಾಸದಲ್ಲಿ ದಾಖಲಾಗಿದೆ.
ಇದು ಮುಂದುವರಿಯಬಾರದು ಎಂಬ ಉದ್ದೇಶದಿಂದ ಈ ರೀತಿಯ ಕ್ರೀಡಾಕೂಟ ಆಯೋಜಿಸಿ ಸಮುದಾಯದ ಯುವಕರನ್ನು ಜಾಗೃತಗಳಿಸಲಾಗುತ್ತಿದೆ ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ರಾಜ್ಯಮಟ್ಟದ ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ 2021ಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಮೂಲಕ ಯುವಕರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದೆ. ಶ್ರೀಮಠ ಯುವಕರಲ್ಲಿರುವ ಪ್ರತಿಭೆ ಗುರುತಿಸಿ, ಅವರಿಗೆ ಸರಿಯಾದ ಮಾರ್ಗದರ್ಶನ ಮಾಡಿಸುತ್ತಿದೆ. ಉನ್ನತ ಶಿಕ್ಷಣ ಪಡೆಯಲು ಅಗತ್ಯ ನೆರವು, ಉದ್ಯೋಗ ಪಡೆಯಲು ಸಹಕಾರ ಸೇರಿದಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ ಎಂದರು.
ಕ್ರೀಡೆ ಎಂದರೆ ಏಕಾಗ್ರತೆ. ಇದು ಕ್ರೀಡಾಪಟು ಹಾಗೂ ವಿದ್ಯಾರ್ಥಿಗಳಿಗೆ ಅತಿ ಮುಖ್ಯವಾಗಿದೆ. ಇದರ ಜತೆಗೆ ಭಾವೈಕ್ಯತೆಯ ಅರಿವು ಮೂಡಿಸಿಕೊಂಡು ಮುಂದೆ ಉತ್ತಮ ಜೀವನ ಕಟ್ಟಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಮಾತನಾಡಿ, ಈ ಮೊದಲು ತುಮಕೂರು ಮತ್ತು ಶಿರಾದಲ್ಲಿ ಕ್ರೀಡಾಕೂಟ ನಡೆಸಿದ್ದು, ಭೋವಿ ಸಮುದಾಯದ ಯುವ ಜನತೆಯನ್ನು ಒಗ್ಗೂಡುವಿಕೆ ಮತ್ತು ಜನಜಾಗೃತಿ ಮೂಡಿಸಲು ನೆರವಾಗಿದೆ. ಕ್ರಿಕೆಟ್‌ನಲ್ಲಿ ಸುಮಾರು 10 ತಂಡಗಳು ಭಾಗವಹಿಸಿವೆ ಎಂದರು.
ನಗರಸಭಾ ನಾಮ ನಿರ್ದೇಶಿತ ಸದಸ್ಯ ತಿಮ್ಮಣ್ಣ, ಸಂಘಟಕರಾದ ರವಿರಾಜ್, ಶಿಕ್ಷಕ ರವಿ ಸಂಘದ ಕಾರ್ಯದರ್ಶಿ ಲಕ್ಷ್ಮಣ, ಮಂಜಪ್ಪ, ಅಜ್ಜಯ್ಯ, ಉಮೇಶ್, ತಿಮ್ಮೇಶ್, ನಾಗರಾಜು, ರಾಜು, ದೇವರಾಜು ಮತ್ತಿತರರಿದ್ದರು.