Advertisement

ರೈತರ ಹೆಸರಿನಲ್ಲಿ ರಾಜಕೀಯ ಪ್ರೇರಿತ ಹೋರಾಟ: ಕಟೀಲ್‌

04:27 PM Feb 07, 2021 | Team Udayavani |

ಚಿತ್ರದುರ್ಗ : ಪ್ರಜಾಪ್ರಭುತ್ವದಲ್ಲಿ ಸಂಧಾನಕ್ಕೆ ಕರೆದಾಗ ಹೋಗಿ ಮಾತುಕತೆ ನಡೆಸುವುದು ಕ್ರಮ. ಆದರೆ ಅದನ್ನು ಮೀರಿ ರೈತರ ಹೆಸರಿನಲ್ಲಿ ಹೋರಾಟ ಮಾಡುವುದು ರಾಜಕೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಸುತ್ತಿನ ಮಾತುಕತೆಗಳಾಗಿವೆ. ಒಂದೂವರೆ ವರ್ಷ ಕಾಯ್ದೆಯನ್ನು ತಡೆಹಿಡಿಯುವುದಾಗಿ ಹೇಳಲಾಗಿದೆ. ರೈತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡಿದೆ. ಆದರೂ ಕಾಂಗ್ರೆಸ್‌-ಎಡಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳೆಲ್ಲಾ ಸೇರಿ ಹೋರಾಟ ಮಾಡುತ್ತಿವೆ ಎಂದು ಆಕ್ಷೇಪಿಸಿದರು.

ಯತ್ನಾಳ್‌ ವಿರುದ್ಧ ಕ್ರಮ: ರಾಜ್ಯದಲ್ಲಿ ನಾಯಕತ್ವ, ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ಹಲವು ಹೇಳಿಕೆಗಳ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ತರುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕುರಿತು ಕೇಂದ್ರದ ಶಿಸ್ತು ಸಮಿತಿಗೆ ವರದಿ ಕಳುಹಿಸಲಾಗಿದೆ ಎಂದು ತಿಳಿಸಿದರು.
ಯತ್ನಾಳ್‌ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಾ ದಿನಕ್ಕೊಂದು ಕನಸು ಕಾಣುತ್ತಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಸಹಜ. ಕೆಲವು ಸಲ ಅವರ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಎಂದರು. ರಾಜ್ಯದಲ್ಲಿನ ಹಲವು ಜಾತಿಗಳು ಮೀಸಲಾತಿ ಸೌಲಭ್ಯ ಕೇಳುತ್ತಿವೆ. ಈ ಬಗ್ಗೆ ಸರ್ಕಾರ ಆಲೋಚನೆ ಮಾಡುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸರಿಯಾದ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

21 ಜಿಲ್ಲೆಗಳ ಸಭೆ: ಈ ನಡುವೆ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ಪಕ್ಷದ ಸಂಘಟನಾತ್ಮಕ ದೃಷ್ಟಿಯಿಂದ ಶನಿವಾರ
ಚಿತ್ರದುರ್ಗ ಹಾಗೂ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯಿತು.

ಚಿತ್ರದುರ್ಗದ ಮಾಳಪ್ಪನಹಟ್ಟಿ ಬಳಿಯ ತಿರುಮಲ ಕಲ್ಯಾಣಮಂಟಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ ಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್‌, ರಾಜ್ಯ ಕಾರ್ಯದರ್ಶಿ ಕೆ.ಎಸ್‌. ನವೀನ್‌ ನೇತೃತ್ವದಲ್ಲಿ ಸಭೆ ನಡೆಯಿತು.

Advertisement

ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಕೋಲಾರ, ಬೆಂಗಳೂರು, ಮೈಸೂರು, ಉಡುಪಿ, ಚಿಕ್ಕಮಗಳೂರು ಸೇರಿದಂತೆ 21 ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗ ಪ್ರಭಾರಿಗಳು, ಸಹ ಪ್ರಭಾರಿಗಳು ಭಾಗವಹಿಸಿದ್ದರು. ಬೂತ್‌ ಕಮಿಟಿ, ಪೇಜ್‌ ಪ್ರಮುಖ್‌ ಸೇರಿದಂತೆ ಬಾಕಿ ಇರುವ ಹಲವು ಕೆಲಸಗಳನ್ನು ಪೂರ್ಣಗೊಳಿಸಲು ಜಿಲ್ಲಾ ಸಮಿತಿಗಳಿಗೆ ಸೂಚನೆ ನೀಡಲಾಯಿತು. ವಿಭಾಗ ಪ್ರಭಾರಿಗಳಿಗೆ ಸಹಲ್‌ ಆಯೋಜಿಸುವುದು, ಅಲ್ಲಿ ನಡೆಸುವ ಆಟೋಟಗಳ ಬಗ್ಗೆ ಮಾಹಿತಿ ನೀಡಲಾಯಿತು ಎಂದು ಮೂಲಗಳು ತಿಳಿಸಿವೆ. ಚಿತ್ರದುರ್ಗದ ಸಭೆಯ ನಂತರ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹಾಗೂ ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್‌ ಹುಬ್ಬಳ್ಳಿಗೆ ತೆರಳಿದರು.

ಓದಿ : ಅಂಡರ್‌ಪಾಸ್‌ ನಿರ್ಮಾಣಕ್ಕಾಗಿ ಪ್ರಾಮಾಣಿಕ ಬೇಡಿಕೆ

Advertisement

Udayavani is now on Telegram. Click here to join our channel and stay updated with the latest news.

Next