Advertisement

ಹೆದ್ದಾರಿ ತಡೆದು ಅನ್ನದಾತರ ಆಕ್ರೋಶ

04:04 PM Feb 07, 2021 | Team Udayavani |

ಚಿತ್ರದುರ್ಗ: ರೈತ ವಿರೋಧಿ  ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ಶನಿವಾರ ಜಿಲ್ಲೆಯಲ್ಲಿ ಹಾದು ಹೋಗಿರುವ ಮೂರು ಹೆದ್ದಾರಿಗಳನ್ನು ಬಂದ್‌ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಚಿತ್ರದುರ್ಗ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಹಾಗೂ ಜಿ.ಆರ್‌. ಹಳ್ಳಿ ಬಳಿ ಪುಟ್ಟಣ್ಣಯ್ಯ ಹಾಗೂ ಕೋಡಿಹಳ್ಳಿ ಚಂದ್ರಶೇಖರ್‌ ಬಣದ ಚಿಕ್ಕಬ್ಬಿಗೆರೆ ನಾಗರಾಜ್‌, ಡಿ.ಎಸ್‌. ಹಳ್ಳಿ ಮಲ್ಲಿಕಾರ್ಜುನ ಸೇರಿದಂತೆ ರೈತರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು ಮಧ್ಯಾಹ್ನ 12:40 ರಿಂದ 1:10ರವರೆಗೆ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ನಿವೃತ್ತ ಪ್ರಾಚಾರ್ಯ, ಸ್ವರಾಜ್‌ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಜೆ. ಯಾದವ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ರೈತರನ್ನು ಹೊರತುಪಡಿಸಿ ಉಳಿದ ಎಲ್ಲರ ಜತೆಗೂ ಮಾತನಾಡುತ್ತಿದ್ದಾರೆ. ಈವರೆಗೆ ರೈತರ ಜತೆ ಮಾತನಾಡಿಲ್ಲ. ತಕ್ಷಣ ರೈತರನ್ನು ಮಾತುಕತೆಗೆ ಕರೆದು ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಜ. 26 ರಂದು ದುಷ್ಕರ್ಮಿಗಳು ಹಿಂಸಾತ್ಮಕ ಪ್ರತಿಭಟನೆ, ಧ್ವಜಾರೋಹಣ ಮಾಡಿದ್ದಾರೆ. ಅಂಥವರನ್ನು ಬಂಧಿ ಸಲು ಸರ್ಕಾರಕ್ಕೆ ಆಗಿಲ್ಲ. ಬದಲಾಗಿ ರೈತರು ಪ್ರತಿಭಟಿಸುವ ಜಾಗದಲ್ಲಿ ಮುಳ್ಳು, ತಡೆಗೋಡೆ ಹಾಕಿ ನಿರ್ಬಂಧಿ ಸುವ ಕೆಲಸಕ್ಕೆ ಮುಂದಾಗಿದ್ದಾರೆ. ರೈತರ ಒಗ್ಗಟ್ಟು ಮುರಿಯುವ ನಿಮ್ಮ ಪ್ರಯತ್ನದಿಂದ ರೈತರ ಶಕ್ತಿ ಹೆಚ್ಚಾಗುತ್ತಲೇ ಇದೆ. ನೀವೇ ರಣರಂಗ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಿರಿ ಎಂದು ದೂರಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಎಂ. ಶಂಕ್ರಪ್ಪ ಮಾತನಾಡಿ, ನಮ್ಮ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದಷ್ಟು ನಾವು ಬೆಳೆಯುತ್ತೇವೆ. ರೈತರು ಓಡಾಡುವ ಜಾಗದಲ್ಲಿ ಕಲ್ಲು, ಮುಳ್ಳು, ತಡೆಗೋಡೆ ಹಾಕುವ ಹೀನ ಕೃತ್ಯವನ್ನು ಸರ್ಕಾರ ಕೈಬಿಡಬೇಕು ಎಂದು ಹೇಳಿದರು.

Advertisement

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಠಮಾರಿ ಧೋರಣೆಯಿಂದ ರೈತರನ್ನು ನಾಶ ಮಾಡುವ ಕೆಲಸಕ್ಕ ಕೈ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರ ಪ್ರಜೆಗಳ ಮಾತಿಗೆ ಮನ್ನಣೆ ನೀಡಬೇಕು. ಆದರೆ, ಮೋದಿ ನೇತೃತ್ವದ ಕಾರ್ಪೋರೆಟ್‌ ಸರ್ಕಾರ
ಬಂಡವಾಳಶಾಹಿಗಳ ಬೆನ್ನಿಗೆ ನಿಂತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಅರಬ್ಬಿ ಸಮುದ್ರಕ್ಕೆ ಹಾಕುತ್ತೇವೆ
ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಸೇರಿದಂತೆ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.

 

ಓದಿ : ಬಿಜೆಪಿ ಯುವ ಮುಖಂಡರಿಗೆ ಸೋಶಿಯಲ್‌ ಮೀಡಿಯಾ ಪಾಠ ಮಾಡಿದ ಡಿಸಿಎಂ ‌ಅಶ್ವತ್ಥನಾರಾಯಣ

 

Advertisement

Udayavani is now on Telegram. Click here to join our channel and stay updated with the latest news.

Next