Advertisement

ಎಸ್‌ಟಿ ಮೀಸಲು ವಿಚಾರ ಅಧಿವೇಶನದಲ್ಲಿ ಪ್ರಸ್ತಾಪ

03:26 PM Jan 25, 2021 | Team Udayavani |

ಚಿತ್ರದುರ್ಗ: ಹಾಲುಮತ ಕುರುಬ ಸಮುದಾಯದ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಹೋರಾಟದ ಹತ್ತನೇ ದಿನದ ಪಾದಯಾತ್ರೆ ಭಾನುವಾರ ಚಿತ್ರದುರ್ಗದಿಂದ ಮುಂದೆ ಸಾಗಿತು.

Advertisement

ಮೈಲಾರಲಿಂಗೇಶ್ವರ ಸ್ವಾಮಿ, ಬೀರಲಿಂಗೇಶ್ವರ ಸ್ವಾಮಿಗಳ ಸ್ಮರಣೆ, ಡಮರುಘದ ಸದ್ದಿನೊಂದಿಗೆ ನಗರದ ಕಬೀರಾನಂದ ಸಮುದಾಯ ಭವನದಿಂದ ಭಾನುವಾರ ಬೆಳಗಿನ ಜಾವ ಸುಮಾರು 5:30ಕ್ಕೆ ಪಾದಯಾತ್ರೆ ಆರಂಭವಾಯಿತು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರೊಂದಿಗೆ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಎಚ್‌.ಎಂ. ರೇವಣ್ಣ ಸೇರಿದಂತೆ ಮತ್ತಿತರ ಪ್ರಮುಖರು ಸಾಥ್‌ ನೀಡಿದರು.

ಓದಿ: ಕನ್ನಡ ಸಾಹಿತ್ಯದ ಕಲ್ಯಾಣ ಅಗತ್ಯ: ವೀರಭದ್ರಪ್ಪ

ಪಾದಯಾತ್ರೆ ತಾಲೂಕಿನ ಕ್ಯಾದಿಗೆರೆ ತಲುಪುತ್ತಿದ್ದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಮುದಾಯದವರು ಅದ್ಧೂರಿ ಸ್ವಾಗತ
ಕೋರಿದರು.

ಮಹಿಳೆಯರು ಶ್ರೀಗಳಿಗೆ ಕಳಶ, ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು. ಉಪಹಾರ ಸೇವಿಸಿದ ನಂತರ ಗ್ರಾಮದಲ್ಲಿ ಜಾಗೃತಿ ಸಭೆ ನಡೆಯಿತು. ಮುಂದುವರಿದ ಪಾದಯಾತ್ರೆ ಹಿರಿಯೂರು ತಾಲೂಕಿನ ಐಮಂಗಲ ಹೊರವಲಯದ ಶಾಲಾ ಆವರಣದಲ್ಲಿ ವಾಸ್ತವ್ಯ ಮಾಡಿತು. ರಜಾ ದಿನವಾದ್ದರಿಂದ ಭಾನುವಾರ ಚಿತ್ರದುರ್ಗ, ಹಾವೇರಿ, ದಾವಣಗೆರೆ, ತುಮಕೂರು, ಬಳ್ಳಾರಿ, ಕೊಪ್ಪಳ, ಬೆಂಗಳೂರು, ಸೇರಿದಂತೆ ರಾಜ್ಯದ
ಮತ್ತಿತರ ಭಾಗಗಳ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Advertisement

ಜೈ ಕುರುಬ, ಜೈ ಕನಕ, ಜೈ ರಾಯಣ್ಣ, ಎಸ್‌ಟಿ ಹೋರಾಟಕ್ಕೆ ಜಯವಾಗಲಿ ಎಂಬ ಘೋಷಣೆ ಮೊಳಗಿಸುತ್ತಾ ಪಾದಯಾತ್ರೆಯಲ್ಲಿ ಸಾಗಿದರು.
ಶನಿವಾರ ರಾತ್ರಿ ಚಿತ್ರದುರ್ಗದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್‌ ನಾಯಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಹಾಲುಮತ ಕುರುಬ  ಸಮುದಾಯದ ಎಸ್‌ಟಿ ಹೋರಾಟದ ಕೂಗು ಜ.28 ರಿಂದ ಆರಂಭವಾಗುವ ವಿಧಾನಮಂಡಲದ ಅಧಿವೇಶನಲ್ಲಿ ಮೊಳಗಲಿದೆ.ಸಮುದಾಯದ ಎಲ್ಲ ನಾಯಕರು ಪಕ್ಷಭೇದ ಮರೆತು ಸರಕಾರದ ಗಮನ ಸೆಳೆಯುತ್ತೇವೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇವೆ ಎಂದು ತಿಳಿಸಿದರು.

ಪಾದಯಾತ್ರೆ ಬೆಂಗಳೂರು ತಲುಪುವ ಮೊದಲೇ ಸರಕಾರದ ಗಮನ ಸೆಳೆಯುತ್ತೇವೆ. ಕುರುಬ ಸಮುದಾಯ ಎಸ್‌ಟಿ ಮೀಸಲಾತಿ ಕೇಳುತ್ತಿರುವುದು  ಮೊದಲಲ್ಲ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕುರುಬರ ಒಳಪಂಗಡಗಳಿಗೆ ಈಗಾಗಲೇ ಎಸ್‌ಟಿ ಸವಲತ್ತು ಲಭಿಸಿದೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸುವ ಅಗತ್ಯವಿದ್ದು ನಮ್ಮ ಹೋರಾಟ ತೀವ್ರಗೊಳಿಸಿದ್ದೇವೆ ಎಂದರು.

ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಕುರುಬ ಸಮುದಾಯದ ಹಿತಾಸಕ್ತಿಗಾಗಿ ಹೋರಾಟ ನಡೆಸಲಾಗುತ್ತಿದೆಯೇ ಹೊರತು ಯಾರ ವಿರುದ್ಧವೂ, ಪರವೂ ಅಲ್ಲ. ಪಾದಯಾತ್ರೆಯ ಮೇಲೆ ಯಾವುದೇ ರಾಜಕೀಯ ಪಕ್ಷ ಪ್ರಭಾವ ಬೀರಿಲ್ಲ ಎಂದು ಸ್ಪಷ್ಟಪಡಿಸಿದರು.

ಓದಿ: 48 ಎಂಪಿ ಎಐ ಟ್ರಿಪಲ್ ಕ್ಯಾಮೆರಾದೊಂದಿಗೆ ವೀವೊ ವೈ 31 ಮಾರುಕಟ್ಟೆಯಲ್ಲಿ ಲಭ್ಯ

ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌, ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಮೀಸಲಾತಿ ಹೋರಾಟ ಸಮಿತಿಯ ಜೀವೇಶ್ವರಿ, ಬಿ.ಟಿ. ಜಗದೀಶ್‌, ಸಿದ್ದರಾಮಪ್ಪ, ರಜನಿ ಲೇಪಾಕ್ಷ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್‌, ಮಹಿಳಾ ಜಿಲ್ಲಾಧ್ಯಕ್ಷೆ ಪಿ.ಕೆ. ಮೀನಾಕ್ಷಿ, ಟಿ. ತಿಪ್ಪಮ್ಮ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next