Advertisement

ಮೀಸಲು ನೀಡದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ

12:25 PM Feb 03, 2021 | Team Udayavani |

ಚಿತ್ರದುರ್ಗ: ಮಠಕ್ಕೆ ಹಣ ನೀಡದಿದ್ದರೂ ಪರವಾಗಿಲ್ಲ. ಪಂಚಮಸಾಲಿಗಳನ್ನು ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಆದರೆ ನಮಗೆ ಮೀಸಲಾತಿ ಕೊಡದಿದ್ದರೆ ಬಿಡುವುದಿಲ್ಲ. ಹತ್ತು ಲಕ್ಷ ಜನ ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2ಎ ಹಾಗೂ ಲಿಂಗಾಯಿತ ಸಮಾಜವನ್ನು ಕೇಂದ್ರ ಸರ್ಕಾರದ ಓಬಿಸಿ ಮೀಸಲಾತಿಗೆ ಸೇರಿಸಲು
ಒತ್ತಾಯಿಸಿ ನಡೆಸುತ್ತಿರುವ ಪಂಚಲಕ್ಷ ಹೆಜ್ಜೆಗಳ ಐತಿಹಾಸಿಕ ಬೃಹತ್‌ ಪಾದಯಾತ್ರೆ ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಬಹಿರಂಗ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು. 1994ರಲ್ಲಿ ಪಂಚಮಸಾಲಿ ಸಮಾಜ ಕಟ್ಟಿದೆವು.

ರಾಜ್ಯದಲ್ಲಿ ನಮ್ಮದು ಬಲಿಷ್ಠ ಸಮಾಜ. ಹಾಗಂತ ಕೈಕಟ್ಟಿ ಸುಮ್ಮನೆ ಕುಳಿತುಕೊಂಡರೆ ನಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಆಗುವುದಿಲ್ಲ. ಒಗ್ಗಟ್ಟಾಗಿ ನಮ್ಮ ಪಾಲು ಕೇಳುವುದು ಪಾದಯಾತ್ರೆಯ ಉದ್ದೇಶ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ನಮಗೆ ಕೊಟ್ಟಿರುವ ಅನುದಾನದ ಆದೇಶ ಪತ್ರವನ್ನು ಬುಧವಾರ ಜಿಲ್ಲಾ ಧಿಕಾರಿಗೆ ವಾಪಸ್‌ ನೀಡಿ ಮೀಸಲಾತಿ ಅಭಿಯಾನ ಮುಂದುವರೆಸುತ್ತೇವೆ ಎಂದರು.

ಈ ಬೃಹತ್‌ ಪಾದಯಾತ್ರೆ ಮೂಲಕ ನಾವು ಮೀಸಲಾತಿ ಪಡೆಯದಿದ್ದರೆ ಮತ್ತೆ ಯಾವ ಮುಖ್ಯಮಂತ್ರಿ ಬಂದರೂ ನಮಗೆ ಮೀಸಲಾತಿ ಸಿಗುವುದಿಲ್ಲ. ಶಿಕ್ಷಣ, ಉದ್ಯೋಗದಿಂದ ಪಂಚಮಸಾಲಿ ಸಮಾಜ ವಂಚಿತವಾಗಿದೆ. ಅದಕ್ಕಾಗಿ ನಮ್ಮ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ನಮ್ಮ ಹೋರಾಟವೇ ವಿನಃ ರಾಜಕೀಯಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಾ ಮಠಗಳು ನಮ್ಮ ಹೋರಾಟ ಬೆಂಬಲಿಸಿವೆ. ಆದರೆ ಮುರುಗೇಶನ ಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಸ್ವಾಮೀಜಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಂಚಮಸಾಲಿಗಳನ್ನು ಕೈಬಿಟ್ಟರೆ ಪಾದಯಾತ್ರೆ ಗಟ್ಟಿ ಧ್ವನಿಯಾಗಿ ಮುಂದುವರಿಯುತ್ತದೆ ಎಂದು ಘೋಷಿಸಿದರು.

ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಮಾತನಾಡಿ, 26 ವರ್ಷಗಳಿಂದ ಮೀಸಲಾತಿಗಾಗಿ ಬೇಡುತ್ತಿದ್ದೇವೆ. ಯಾವ ಸರ್ಕಾರಗಳು ನಮ್ಮ ಕೂಗನ್ನು ಕೇಳಿಸಿಕೊಳ್ಳಲಿಲ್ಲ. ಅಂತಿಮವಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿಗಳು ಪಾದಯಾತ್ರೆ ಮೂಲಕ ಮೀಸಲಾತಿಗಾಗಿ ಬೀದಿಗಿಳಿದಿದ್ದಾರೆ. ಸರ್ಕಾರದಲ್ಲಿ
ನಮ್ಮ ಸಮಾಜದ 17 ಶಾಸಕರುಗಳಿದ್ದಾರೆ. ಬಿಜೆಪಿಗೆ ಪಂಚಮಸಾಲಿ ಸಮಾಜದ ದೊಡ್ಡ ಕೊಡುಗೆಯಿದೆ. ಆದರೂ ಬೀದಿಯಲ್ಲಿ ಬಿಸಿಲಲ್ಲಿ ನಡೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಮಾಜಿ ಸಚಿವ ಎಚ್‌.ಆಂಜನೇಯ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಪಂಚಮಸಾಲಿ ಲಿಂಗಾಯಿತರನ್ನು
ನಿರ್ಲಕ್ಷಿಸಬಾರದಿತ್ತು. ಮೀಸಲಾತಿಯನ್ನು ಯಾವಾಗಲೋ ಕೊಡಬೇಕಿತ್ತು. ಇನ್ನಾದರೂ ಎಚ್ಚೆತ್ತು ಪಾದಯಾತ್ರೆ ವಿಧಾನಸೌಧಕ್ಕೆ ಮುತ್ತಿಗೆ
ಹಾಕುವುದರೊಳಗೆ ಮೀಸಲಾತಿ ಕೊಡಲಿ. ನಿಮ್ಮ ಹೋರಾಟಕ್ಕೆ ನಮ್ಮ ಸಮುದಾಯದ ಬೆಂಬಲ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಪಂಚಮಸಾಲಿ ಸಮುದಾಯ ಬಡ ರೈತ ವರ್ಗವಿದ್ದಂತೆ. ನಿಮ್ಮದು ರೈತನ ಬದುಕಿನಂತೆ ಕಠಿಣವಾಗಿದೆ. ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ 2ಎಗೆ ಹಾಗೂ ಲಿಂಗಾಯಿತ ಸಮಾಜವನ್ನು ಕೇಂದ್ರ ಓಬಿಸಿ ಮೀಸಲಾತಿಗೆ ಸೇರಿಸುವಂತೆ ಪಾದಯಾತ್ರೆ ಹೊರಟಿರುವುದು ಸಮಂಜಸವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಎಸ್‌.ಕೆ. ಬಸವರಾಜನ್‌ ಮಾತನಾಡಿ, ನ್ಯಾಯಕ್ಕಾಗಿ ಪಂಚಮಸಾಲಿ ಸಮಾಜ ಹೋರಾಡುತ್ತಿದೆ. ಎಲ್ಲಾ ಲಿಂಗಾಯಿತರು ಬೆಂಬಲಿಸೋಣ. ಇಬ್ಬರೂ ಸ್ವಾಮೀಜಿಗಳು ಒಗ್ಗೂಡಿರುವುದು ಸಂತೋಷದ ಸಂಗತಿ. ಒಳಪಂಗಡಗಳಿಗೂ ಮೀಸಲಾತಿ ಸಿಗಲಿ
ಎಂದು ಆಶಿಸಿದರು.

ಶಾಸಕರಾದ ಬಸವನಗೌಡ ಪಾಟೀಲ್‌ ಯತ್ನಾಳ್‌, ಅರವಿಂದ ಬೆಲ್ಲದ್‌, ಅರುಣ್‌ ಪೂಜಾರಿ, ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್‌, ಬಾವಿ ಬೆಟ್ಟಪ್ಪ, ಬಿ.ಸಿ. ಉಮಾಪತಿ, ವಿರಾಜ್‌ ಪಾಟೀಲ್‌, ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ನಂಜಯ್ಯನಮಠ, ಎಸ್‌.ಎಂ.ಎಲ್‌. ತಿಪ್ಪೇಸ್ವಾಮಿ, ಪಟೇಲ್‌ ಶಿವಣ್ಣ, ಭೀಮಸಮುದ್ರದ ಜಿ.ಎಸ್‌. ಮಂಜುನಾಥ್‌, ಸಂಗಮೇಶ್‌ ಬಬಲೇಶ್‌,
ಪ್ರಕಾಶ್‌, ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ನಾಗನಗೌಡ, ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷೆ ಮೋಕ್ಷ ರುದ್ರಸ್ವಾಮಿ, ರುದ್ರಾಣಿ ಗಂಗಾಧರ, ವೀರಶೈವ ಲಿಂಗಾಯಿತ ಯುವ ವೇದಿಕೆ ಜಿಲ್ಲಾಧ್ಯಕ್ಷ ಎಚ್‌.ಎಂ. ಮಂಜುನಾಥ ಸೇರಿದಂತೆ

ಪಂಚಮಸಾಲಿ ಲಿಂಗಾಯಿತ ಸಮಾಜದ ಅನೇಕ ಮುಖಂಡರುಗಳು ವೇದಿಕೆಯಲ್ಲಿದ್ದರು. ಹರಿಹರ ಪಂಚಮಸಾಲಿ ಮಠದ ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿತೇಂದ್ರ ಹುಲಿಕುಂಟೆ ನಿರೂಪಿಸಿದರು. ನಿರಂಜನ ದೇವರಮನೆ ನಿರೂಪಿಸಿದರು. ಮೆರವಣಿಗೆಯಲ್ಲಿ ಪೂರ್ಣಕುಂಭ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ಓದಿ :ಅಡುಗೆ ಮನೆಯಲ್ಲಿ ಅನಿಲ ಸೋರಿಕೆ: ಸ್ಫೋಟಗೊಂಡ ಫ್ರಿಡ್ಜ್, ಐವರಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next