ಹಿರಿಯೂರು: ರಾಜ್ಯದಲ್ಲಿ ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ ಗ್ರಾಮೀಣ ಪ್ರದೇಶದ ಜನರು ಹಾಗೂ ರೈತರು ತೀವ್ರ ಸಂಕಷ್ಟದಲ್ಲಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅಂತಹ ವಿದ್ಯಾರ್ಥಿಗಳಿಗೆ ಶೇ.50ರಷ್ಟು ರಿಯಾಯಿತಿ ನೀಡುವ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ
ಮನವಿ ಮಾಡಿದರು.
ನಗರದ ಕ್ಷೇತ್ರ ಸಮನ್ವಯ ಅಧಿ ಕಾರಿಗಳ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಕ್ಷೇತ್ರ ಶಿಕ್ಷಣಾ ಧಿಕಾರಿಗಳಾದ ಪಿ.ರಾಮಯ್ಯ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಗರದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ ಖಾಸಗಿ ಶಿಕ್ಷಣ ಸಂಸ್ಥೆಗಳು ಕೊರೊನಾ ಸಂಕಷ್ಟದಲ್ಲಿಯೂ ಸಹ, ಶಿಕ್ಷಕರಿಗೆ ವೇತನ ಕೊಟ್ಟು ಕರೆಸಿ ಆನ್‌ಲೈನ್ ತರಗತಿಗಳನ್ನು ನಡೆಸಿದಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿಕ್ಷಣವನ್ನು ನಿರಂತರವಾಗಿ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿವೆ. ನಿಜಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ರೈತ ಸಂಘದ ಮುಖಂಡರಾದ ಆಲೂರು
ಸಿದ್ಧರಾಮಣ್ಣ ಮಾತನಾಡಿ, ತಾಲೂಕಿನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ತಾಲೂಕಿನ ಶಿಕ್ಷಣ ಸಂಸ್ಥೆಗಳು, ಕಡಿಮೆ ಶುಲ್ಕ ಪಡೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಆದರೆ ಕಳೆದ ವರ್ಷದ ಕೊರೊನಾ ಪರಿಸ್ಥಿತಿಯಿಂದ ಗ್ರಾಮೀಣ ಜನರು ತೀವ್ರ ಬಳಲಿದ್ದು, ಈ ವರ್ಷದ ಶುಲ್ಕದಲ್ಲಿ ಸ್ವಲ್ಪ ಕಡಿಮೆ ಮಾಡಿಕೊಳ್ಳಿ ಎಂದು ಮನವಿಯಾಗಿದೆ ಎಂದರು.
ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥ ಆರ್.ಕೆ.ಎಂ. ವೆಂಕಟೇಶ್, ಮುಖಂಡರಾದ ಆಲೂರು ಹನುಮಂತರಾಯಪ್ಪ, ವೀರಕರಿಯಪ್ಪ, ತಿಮ್ಮಾರೆಡ್ಡಿ, ನಹೀಮ್, ತಿರುಮೂರ್ತಿ, ವೀರಭದ್ರಪ್ಪ, ಇತರರು ಮಾತನಾಡಿ, ವಿದ್ಯಾ ಸಂಸ್ಥೆಗಳ ನಿರ್ವಹಣೆ ಬಗ್ಗೆ ಶಿಕ್ಷಕ-ಶಿಕ್ಷಕಿಯರಿಗೆ ಸಂಬಳ ನೀಡುವುದು ಸೇರಿದಂತೆ ಬ್ಯಾಂಕ್‌ಗಳಿಗೆ ವಿದ್ಯಾಸಂಸ್ಥೆ ಕಟ್ಟಡದ ಹಾಗೂ ಶಾಲಾ ಬಸ್‌ಗಳ ಸಾಲದ ಕಂತುಗಳನ್ನು ಸಹ ಕಟ್ಟಲಾಗುತ್ತಿಲ್ಲ, ನೀವುಗಳು ಪೋಷಕರನ್ನು ಮನವೊಲಿಸಿ ಮಕ್ಕಳನ್ನು ಶಾಲೆಗಳಿಗೆ ಅಲ್ಪಸ್ವಲ್ಪ ಹಣ ಕಟ್ಟಿ ಮಕ್ಕಳ ದಾಖಲು ಮಾಡಿಸಿದರೆ ಮಾತ್ರ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸಾಧ್ಯವಾಗುತ್ತದೆ. ಈ ವರ್ಷದ ಶುಲ್ಕವಿರಲಿ, ಕನಿಷ್ಠ ಕಳೆದ ವರ್ಷದ ಶುಲ್ಕಗಳನ್ನು ಪಾವತಿಸಲು ದಯಮಾಡಿ ಸಹಕರಿಸಿ ಎಂಬುದಾಗಿ ರೈತ ಮುಖಂಡರಿಗೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾ ಧಿಕಾರಿ ಪಿ.ರಾಮಯ್ಯ ಮಾತನಾಡಿ, ಈ ಬಗ್ಗೆ ಹೇಳಬೇಕೆಂದರೆ ಜಿಲ್ಲೆಯ ಬೇರೆ ತಾಲೂಕುಗಳ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೋಲಿಸಿದರೆ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಹೊರೆಯಾಗುವಂತಹ ಶುಲ್ಕಗಳನ್ನು ವಿಧಿ ಸುತ್ತಿಲ್ಲಾ, ಪೋಷಕರೊಂದಿಗೆ ಸಹಕರಿಸುವ ಮೂಲಕ ಯಾವುದೇ ಸಮಸ್ಯೆಗಳು ನಮ್ಮ ಬಳಿಗೆ ಬಾರದಂತೆ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದರು. ಶಿಕ್ಷಣ ಸಂಯೋಜಕರಾದ ಶಶಿಧರ್, ರೈತ ಮುಖಂಡರಾದ ಆಲೂರು ವೀರಣ್ಣಗೌಡ, ವಿರೂಪಾಕ್ಷಪ್ಪ ಬಬ್ಬೂರು ಸೇರಿದಂತೆ ಅನೇಕರು
ಪಾಲ್ಗೊಂಡಿದ್ದರು.
ಓದಿ :
ವನ್ಯಸಂಪತ್ತು: ಲೋಗೋ ಬಿಡುಗಡೆ