Advertisement

ನಿರಂತರ ಹೋರಾಟದಲ್ಲಿ ಪಾಲ್ಗೊಳ್ಳಿ

04:01 PM Jan 29, 2021 | Team Udayavani |

ಚಿತ್ರದುರ್ಗ: ಸಂಘಟನೆ ಯಾವುದೇ ಒಂದು ಜಾತಿಗೆ ಸೀಮಿತವಾಗಿರದೆ ಶೋಷಿತರು, ತುಳಿತಕ್ಕೊಳಗಾದವರು, ದಮನಿತರ ಪರವಾಗಿರಬೇಕು ಎಂದು ಹಿರಿಯೂರು ತಾಲೂಕು ಕೋಡಿಹಳ್ಳಿ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಐಯುಡಿಪಿ ಬಡಾವಣೆಯಲ್ಲಿ ಭೀಮ್‌ ಆರ್ಮಿ ಜಿಲ್ಲಾ ಸಮಿತಿ ಹಾಗೂ ಪದಾಧಿ ಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಸಂಘಟನೆಯಲ್ಲಿ ಶಕ್ತಿಯಿದೆ. ಸಂಘಟನೆಯಿಂದ ಗುರುತಿಸಿಕೊಳ್ಳುವ ಬದಲು ಹೋರಾಟದ ಮೂಲಕ ಗುರುತಿಸಿಕೊಂಡಾಗ ಮೌಲ್ಯ ಜಾಸ್ತಿ. ಆರೋಗ್ಯಕರ ಸಂಘಟನೆ ಕಟ್ಟಲು ಎಲ್ಲರ ಸಹಕಾರ ಮುಖ್ಯ. ಎಲ್ಲಾ ಜಾತಿ, ವರ್ಗ, ಸಮಾಜದ ಹಿತ ಕಾಪಾಡಿದಾಗ ಮಾತ್ರ ಅಂತಹ ಸಂಘಟನೆ ಬಲಶಾಲಿಯಾಗಿ ಬೆಳೆಯುತ್ತದೆ ಎಂದು ಹೇಳಿದರು.
ನೀವುಗಳೆಲ್ಲಾ ಸಮಾಜ ಕಟ್ಟುವ ಸೈನಿಕರಾಗಬೇಕು. ಭೀಮ್‌ ಆರ್ಮಿ ಸಂಘಟನೆಯನ್ನು ಜೋಪಾನವಾಗಿ ಕಾಪಾಡಿಕೊಂಡು ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಸಂಘಟನೆಯೆಂದರೆ ಬಲಿಷ್ಠತೆಯ ಸಂಕೇತ. ಒಂದು ಸಂಘಟನೆ ಮತ್ತೂಂದು ಸಂಘಟನೆಯನ್ನು ನೋಡಿ ದ್ವೇಷ, ಅಸೂಯೆ ಪಟ್ಟುಕೊಳ್ಳಬಾರದು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಮಲ್ಲೇಶ್‌ ಮಾತನಾಡಿ ಶೋಷಿತರು, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕೆಲಸವನ್ನು ಭೀಮ್‌ ಆರ್ಮಿ ಪದಾ ಧಿಕಾರಿಗಳು ಮಾಡಬೇಕಿದೆ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಏನಾದರೂ ಬದಲಾವಣೆ ಕಂಡುಕೊಳ್ಳಬಹುದು ಎಂದರು.

ಸಂಘಟನೆಯೆಂದರೆ ಸಹಜವಾಗಿ ಕಾಲೆಳೆಯುವವರು ಜಾಸ್ತಿಯಿರುತ್ತಾರೆ. ಆಸೆ, ಆಮಿಷಗಳಿಗೆ ಬಲಿಯಾಗಬೇಡಿ. ಒಳ್ಳೊಳ್ಳೆ ಕೆಲಸ ಮಾಡಿದಾಗ ಸಮಾಜ ನಿಮ್ಮನ್ನು ಗುರುತಿಸುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸ್ಪೂರ್ತಿಯಾಗಿರಿಸಿಕೊಳ್ಳಿ ಎಂದರು.
ನಗರಸಭೆ ಸದಸ್ಯ ನಸ್ರುಲ್ಲಾ ಮಾತನಾಡಿ, ಬಾಲ್ಯದಲ್ಲಿಯೇ ಸಾಕಷ್ಟು ನೋವು, ಅವಮಾನಗಳನ್ನು ಅನುಭವಿಸಿ ದೇಶಕ್ಕೆ ಭದ್ರವಾದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಅಂಬೇಡ್ಕರ್‌ರವರ ಆದರ್ಶ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲುವಂತೆ ಹೇಳಿದರು.

ಅಂತಾರಾಷ್ಟ್ರೀಯ ಕ್ರೀಡಾಪಟು ನಾಗಭೂಷಣ್‌, ಭೀಮ್‌ ಆರ್ಮಿ ಜಿಲ್ಲಾಧ್ಯಕ್ಷ ಅವಿನಾಶ್‌ ಮಾತನಾಡಿದರು.

Advertisement

ಓದಿ : ಕೋವಿಡ್‌ ಲಸಿಕೆ: ಜಿಲ್ಲೆ ದ್ವಿತೀಯ ಸ್ಥಾನ

Advertisement

Udayavani is now on Telegram. Click here to join our channel and stay updated with the latest news.

Next