ಹೊಳಲ್ಕೆರೆ: ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ದೇಶದ ನಾಗರಿಕರು ಹಸಿವಿನಿಂದ ಅತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿರುವುದು ದೇಶದ ದುರಂತ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಪಟ್ಟಣದ ಪೆಟ್ರೋಲ್ ಬಂಕ್‌ವೊಂದರ ಎದುರು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ಸಂಕಷ್ಟದಲ್ಲೂ ಜನರ ಮೇಲೆ ಬೆಲೆ ಏರಿಕೆ ಬರೆ ಹಾಕುವ ಕೆಲಸವನ್ನು ಮೋದಿ ಸರಕಾರ ಮಾಡಿದೆ.
ಕೇಂದ್ರ ಸರಕಾರದ ದುರಾಡಳಿತದಿಂದಾಗಿ ರೈತರು, ವ್ಯಾಪಾರಸ್ಥರು, ನೌಕರರು, ಕಾರ್ಮಿಕರು, ಯುವಕರು ಬೀದಿಯಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಇಂದು ಎಲ್ಲಾ ಹಂತದಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಎ.ವಿ. ಉಮಾಪತಿ ಮಾತನಾಡಿ, ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ ಹಸಿವು ಮುಕ್ತ ಕರ್ನಾಟಕ ಮಾಡಲಾಗಿತ್ತು. ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳಿಂದಾಗಿ ದೇಶ ದಿವಾಳಿ ಹಂತಕ್ಕೆ ಬಂದು ನಿಂತಿದೆ. ಕೇಂದ್ರ ಸರಕಾರ ಅನಗತ್ಯವಾಗಿ ಬೆಲೆಗಳನ್ನು ಏರಿಕೆ ಮಾಡಿ ದೇಶದಲ್ಲಿರುವ ದಲಿತರು, ಬಡವರು, ಹಿಂದುಳಿದವರು ಅರ್ಥಿಕವಾಗಿ ಸಂಕಷ್ಟಕ್ಕೆ ತಳ್ಳಿದೆ ಎಂದು ದೂರಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ, ಪುರಸಭೆ ಸದಸ್ಯರಾದ ಬಿ.ಎಸ್. ರುದ್ರಪ್ಪ, ಸೈಯದ್ ಸಜೀಲ್, ಮನ್ಸೂರ್, ಕೆ.ಎಂ. ಶಿವಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಧು ಪಾಲೇಗೌಡ, ಲೋಕೇಶ್ ನಾಯ್ಕ, ಅಲಿಮುಲ್ಲ ಷರೀಫ್ ಮತ್ತಿತರರು ಇದ್ದರು.