ಚಿತ್ರದುರ್ಗ: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರನ್ನು ಪತ್ತೆ ಮಾಡಿ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮುಂಗಾರು ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿತ್ತನೆ ಬೀಜ ಹಾಗೂ ಗೊಬ್ಬರದ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಯಾವ ಮುಲಾಜಿಗೂ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅ ಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ ವರ್ಷಕ್ಕಿಂತ ಈ ವರ್ಷ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ 110 ಮಿಮೀ ಮಳೆ ಹೆಚ್ಚಾಗಿದೆ. ಬಿತ್ತನೆ ಬೀಜದಲ್ಲಿ ಶೇಂಗಾ, ತೊಗರಿ ಸೇರಿದಂತೆ ಒಟ್ಟು 8303 ಟನ್ ಬೀಜ ದಾಸ್ತಾನು ಇದೆ. ಗೊಬ್ಬರ ಕೂಡ ಸಾಕಷ್ಟು ಪ್ರಮಾಣದಲ್ಲಿ ಇದ್ದು, ಯಾವುದೇ ರೀತಿಯಲ್ಲಿ ಗೊಬ್ಬರದ ತೊಂದರೆ ಇಲ್ಲ. ಯೂರಿಯಾ, ಪೊಟ್ಯಾಷ್ ಸೇರಿದಂತೆ 21,331 ಟನ್ ಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನಿದೆ. ಹಾಗಾಗಿ ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಕೃಷಿ ಇಲಾಖೆ ಸಂಪೂರ್ಣ ಸಿದ್ಧವಾಗಿದೆ ಎಂದು ತಿಳಿಸಿದರು.
ಬಹು ಬೆಳೆ ಬೆಳೆಯಲು ಸಲಹೆ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿ 1.63 ಕೋಟಿ ರೂ. ಮೌಲ್ಯದ 17,000 ಪ್ಯಾಕೆಟ್ ತೊಗರಿ ಬೀಜ ಹಾಗೂ 5,000 ಶೇಂಗಾ ಚೀಲಗಳನ್ನು ಒಟ್ಟು 22,000 ಕುಟುಂಬಗಳಿಗೆ ಉಚಿತವಾಗಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ ವಿತರಿಸಲಾಗುವುದು. ರೈತರು ಬಹು ಬೆಳೆಗಳನ್ನು ಬೆಳೆಯಬೇಕು. ಹಿರಿಯೂರು ಮತ್ತು ಚಳ್ಳಕೆರೆ ತಾಲೂಕಿನಲ್ಲಿ ಕೇವಲ ಶೇಂಗಾ ಬೆಳೆಯನ್ನು ಬೆಳೆಯಲಾಗುತ್ತಿದೆ. ಹಾಗಾಗಿ ರೈತರು ಒಂದೇ ಬೆಳೆಗೆ ಸೀಮಿತವಾಗಬಾರದು ಎಂಬ ಉದ್ದೇಶ ಹೊಂದಲಾಗಿದೆ ಎಂದರು.
ರಾಗಿ ಮತ್ತು ಭತ್ತದ ಬೆಂಬಲ ಬೆಲೆಗೆ ಸಂಬಂ ಧಿಸಿದಂತೆ ಮುಖ್ಯಮಂತ್ರಿಗಳು ಈಗಾಗಲೇ 300 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ. ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ ಎಂದು ಸಚಿವರು ತಿಳಿಸಿದರು.
ಆಹಾರ ಉತ್ಪಾದನೆಯಲ್ಲಿ ರಾಜ್ಯ ನಂ.1: ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಸಹ ಕಳೆದ ಒಂದುವರೆ ವರ್ಷದಲ್ಲಿ ರಾಜ್ಯದಲ್ಲಿ ಕೃಷಿ ಇಲಾಖೆ ವತಿಯಿಂದ 153 ಲಕ್ಷ ಮೆಟ್ರಿಕ್ ಟನ್ ಆಹಾರ ಬೆಳೆಯುವುದರ ಮೂಲಕ ಕರ್ನಾಟಕ ರಾಜ್ಯ ನಂ.1 ಸ್ಥಾನದಲ್ಲಿದ್ದು, ಶೇ.10 ರಷ್ಟು ಆಹಾರ ಉತ್ಪಾದನೆಯಾಗಿದೆ. ಕೋವಿಡ್ ನಿಯಂತ್ರಣವನ್ನು ಸರ್ಕಾರ ಶಿಸ್ತುಬದ್ಧವಾಗಿ ನಿರ್ವಹಿಸುತ್ತಿದೆ ಎಂದು ಸಚಿವರು ತಿಳಿಸಿದರು.