ಚಿತ್ರದುರ್ಗ: ಅನುದಾನ ರಹಿತ ಖಾಸಗಿ ಶಾಲೆಗಳ ವಿಶೇಷ ಪ್ಯಾಕೇಜ್ ಪರಿಷ್ಕರಿಸುವುದರ ಜೊತೆಗೆ ಅನುದಾನ ರಹಿತ ಕಾಲೇಜು ಉಪನ್ಯಾಸಕರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಹಾಗೂ ಅನುದಾನ ರಹಿತ ಶಾಲಾ, ಕಾಲೇಜುಗಳ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ಪ್ರಸ್ತುತ ಕೋವಿಡ್-19 ಕಾರಣದಿಂದಾಗಿ ಬಹುತೇಕ ಖಾಸಗಿ ಶಾಲಾ, ಕಾಲೇಜುಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಮತ್ತು ಆಡಳಿತ ಸಿಬ್ಬಂ ಗೆ ವೇತನ ನೀಡಲಾರದ ದುಸ್ಥಿತಿಗೆ ತಲುಪಿದೆ ಎಂದು ಮನವಿಯಲ್ಲಿ ಉಲ್ಲೇಖೀಸಿದ್ದಾರೆ.
ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮ ಜೀವನೋಪಾಯಕ್ಕೆ ಬೀದಿಗಳಲ್ಲಿ ಹಣ್ಣು ತರಕಾರಿ ಮಾರಾಟ ಮಾಡುವುದು, ನರೇಗಾದಡಿ ಕೂಲಿ ಕೆಲಸ ಮಾಡುವುದು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕ, ಉಪನ್ಯಾಸಕರ ಬವಣೆಗೆ ಬೆಲೆ ಕೊಟ್ಟು 5 ಸಾವಿರ ರೂ. ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ.
ತಾವು ಈಗಾಗಲೇ ಘೋಷಣೆ ಮಾಡಿರುವ ಪ್ಯಾಕೇಜನ್ನು ಪರಿಶೀಲಿಸಿ ಖಾಸಗಿ ಅನುದಾನಿತ ಶಾಲಾ, ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕರಿಗೆ ರೂ. 10 ಸಾವಿರ ರೂ. ಬೋಧಕೇತರರಿಗೆ 5 ಸಾವಿರ ರೂ. ಪ್ಯಾಕೇಜ್ ಪರಿಷ್ಕೃ ಆದೇಶ ಮಾಡಬೇಕು.
ಖಾಸಗಿ ಅನುದಾನ ರಹಿತ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ಥಿತಿಗತಿ ಸಹ ಶಿಕ್ಷಕರ ಸ್ಥಿತಿಗತಿಗಿಂತ ಭಿನ್ನವಾಗಿಲ್ಲ. ಅದರಂತೆ ತಾವು ಘೋಷಿಸಿರುವ ಪ್ಯಾಕೇಜ್‌ನಲ್ಲಿ ಅನುದಾನರಹಿತ ಕಾಲೇಜುಗಳ ಉಪನ್ಯಾಸಕರನ್ನು ಸೇರಿಸಿ ಪರಿಷ್ಕೃತ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.