Advertisement

ತೆರೆಮರೆ ಸಾಧಕರಿಂದ ಶವಗಳಿಗೆ ಮುಕ್ತಿ

10:17 PM Jun 07, 2021 | Team Udayavani |

„ತಿಪ್ಪೇಸ್ವಾಮಿ ನಾಕೀಕೆರೆ

Advertisement

ಚಿತ್ರದುರ್ಗ: ಹತ್ತಿರದವರು ಮೃತಪಟ್ಟಾಗ ಅವರ ಅಂತಿಮ ದರ್ಶನ ಮಾಡುವುದು ಸಂಪ್ರದಾಯ. ಆದರೆ ಕೊರೊನಾದಿಂದ ಮೃತಪಟ್ಟರೆ ನೋಡಲು ಮುಖವೂ ಸಿಗುವುದಿಲ್ಲ, ಜನರೂ ಬರುವುದಿಲ್ಲ. ಕೋವಿಡ್‌ನಿಂದ ಯಾರಾದರೂ ಮತಪಟ್ಟರೆ ಆಸ್ಪತ್ರೆಯವರು ಮುಖವೂ ಕಾಣದಂತೆ ಪ್ಲಾಸ್ಟಿಕ್‌ನಿಂದ ಪಾರ್ಥಿವ ಶರೀರವನ್ನು ಪ್ಯಾಕ್‌ ಮಾಡಿಕೊಡುತ್ತಾರೆ. ಹೀಗೆ ಪ್ಯಾಕ್‌ ಆಗಿ ಬರುವ ಹೆಣವನ್ನು ಮತರ ಸಂಬಂ ಧಿಗಳು ಮುಟ್ಟದಂತಹ ಸ್ಥಿತಿಯನ್ನು ಕೊರೊನಾ ತಂದಿಟ್ಟಿದೆ.

ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ಎದುರಿಸಲು ನೂರಾರು ಸಂಘ-ಸಂಸ್ಥೆಗಳು ಹೆಗಲಿಗೆ ಹೆಗಲು ಕೊಟ್ಟು ನಿಂತಿವೆ. ಆಸ್ಪತ್ರೆ, ಆಕ್ಸಿಜನ್‌, ಆಹಾರ, ನೀರು, ಮಾತ್ರೆ ಸೇರಿದಂತೆ ಎಲ್ಲಾ ಹಂತದಲ್ಲೂ ಪರಸ್ಪರ ಸಹಕಾರ ನೀಡುತ್ತಿದ್ದಾರೆ. ಇದೆಲ್ಲಕ್ಕಿಂತ ಮಿಗಿಲಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದು ಪುಣ್ಯದ ಕಾರ್ಯ. ತೆರೆಮರೆಯ ಸಾಧಕರು: ಸಾಕಷ್ಟು ಜನ ಆಹಾರ ಕಿಟ್‌, ಊಟ, ಆಕ್ಸಿಜನ್‌ ಸಿಲಿಂಡರ್‌ ಕೊಟ್ಟು ಸುದ್ದಿಯಾಗುತ್ತಿದ್ದಾರೆ. ಆದರೆ ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ವೀರಮದಕರಿ ಸೇವಾ ಟ್ರಸ್ಟ್‌ನ ಸುಮಾರು 15 ಜನರ ತಂಡ ಕಳೆದ ಎರಡು ತಿಂಗಳಿನಿಂದ ಕೋವಿಡ್‌ ಸೋಂಕು ತಗುಲಿ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವುದರಲ್ಲಿ ತೊಡಗಿಸಿಕೊಂಡಿದೆ.

ಈವರೆಗೆ ಸುಮಾರು 100 ಜನರ ಅಂತ್ಯ ಸಂಸ್ಕಾರ ಮಾಡಿರಬಹುದು. ಆರಂಭದಲ್ಲಿ ನಮಗೆ ಪಿಪಿಇ ಕಿಟ್‌ ಕೂಡ ಇರಲಿಲ್ಲ. ದಾನಿಗಳಿಂದ ಪಡೆದು ಈಗ ಧೈರ್ಯವಾಗಿ ಅಂತಿಮ ಸಂಸ್ಕಾರ ಮಾಡುತ್ತಿದ್ದೇವೆ. ಮೃತರಿಗೆ ಅವರ ಕೊನೆಯ ಶಾಸ್ತ್ರಗಳನ್ನು ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಹೂವು, ಊದುಬತ್ತಿ, ಕರ್ಪೂರ ಸೇರಿದಂತೆ ಹಲವು ಪರಿಕರಗಳನ್ನು ಸ್ವಂತ ಖರ್ಚಿನಿಂದ ಭರಿಸಿದ್ದೇವೆ.

ಅನೇಕರು ನಮಗೆ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ವಿಹಿಂ ‌ ಕಾರ್ಯಕರ್ತರು. ಕೆಲವು ಸಲ ಮೃತಪಟ್ಟವರ ಸಂಬಂಕರು ಅಂತಿಮ ಸಂಸ್ಕಾರ ಮುಗಿಯುವವರೆಗೆ ನಮ್ಮ ಜತೆಗಿರುತ್ತಾರೆ. ನಾವು ಅವರನ್ನು ದೂರ ನಿಲ್ಲಿಸಿ ಸಮಾಧಿ ಮಾಡುವುದು ಅಥವಾ ಅಗ್ನಿಸ್ಪರ್ಶ ಮಾಡುವುದು ಮಾಡುತ್ತೇವೆ. ಇನ್ನು ಕೆಲವು ಸಲ ಮೃತಪಟ್ಟವರ ಜತೆಗೆ ಯಾರೂ ಬರುವುದಿಲ್ಲ. ಅವರಿಗೆ ನಾವೇ ಅಗ್ನಿಸ್ಪರ್ಶ ಮಾಡುತ್ತೇವೆ. ಮನೆಗಳಲ್ಲಿ ಮೃತಪಟ್ಟವರ ಮೃತ ದೇಹಗಳನ್ನು ಮುಟ್ಟದೆ ನಮಗೆ ಫೋನ್‌ ಮಾಡುತ್ತಾರೆ. ಇದೊಂದು ಪುಣ್ಯ ಕಾರ್ಯ ಎಂದು ಭಾವಿಸಿ ಎಲ್ಲವನ್ನೂ ನಿಭಾಯಿಸುತ್ತಿದ್ದೇವೆ. ನಮಗೂ ಮನೆಯಲ್ಲಿ ಸಣ್ಣಮಕ್ಕಳಿದ್ದಾರೆ. ಅವರನ್ನು ನೆನೆದು ಮನೆಗೆ ಹೋಗುವಾಗ ಆತಂಕವಾಗುತ್ತದೆ ಎನ್ನುತ್ತಾರೆ ವಿಹಿಂಪ ಮುಖಂಡ ಓಂಕಾರ್‌. ಕೊರೊನಾ ಮೊದಲ ಅಲೆಯಿಂದಲೂ ಈ ಕೆಲಸದಲ್ಲಿ ಭಾಗಿಯಾಗಿದ್ದೇವೆ. ನಗರಸಭೆಯ ಒಂದು ತಂಡ ಕೂಡ ಇದೇ ಕೆಲಸದಲ್ಲಿ ತೊಡಗಿದೆ. ಅವರಿಗೂ ಸಾಥ್‌ ನೀಡುತ್ತೇವೆ. ಕೆಲವು ಸಲ ರಾತ್ರಿ 12 ಗಂಟೆವರೆಗೆ ಅಂತ್ಯಸಂಸ್ಕಾರ ಮಾಡಿದ್ದೂ ಇದೆ ಎಂದು ಅವರು ವಿವರಿಸುತ್ತಾರೆ.

Advertisement

ಕೋವಿಡ್‌ ಸೇವೆಗೆ ವಾಹನಗಳ ನಿಯೋಜನೆ: ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ಕರೆತರಲು, ಮೃತಪಟ್ಟವರನ್ನು ಸ್ಮಶಾನಕ್ಕೆ ಸಾಗಿಸಲು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ತುರ್ತು ಅಗತ್ಯ ಇರುವವರಿಗೆ ರಕ್ತದಾನ ಕೂಡಾ ಬಜರಂಗದಳ ಕಾರ್ಯಕರ್ತರು ಮಾಡುತ್ತಿದ್ದಾರೆ. ನಗರದಲ್ಲಿ ಆಕ್ಸಿಜನ್‌ ಅವಶ್ಯಕತೆ ಇರುವವರಿಗೆ ಎರಡು 10 ಮತ್ತು 5 ಲೀಟರ್‌ ಸಾಮರ್ಥ್ಯದ 2 ಆಕ್ಸಿಜನ್‌ ಕಾನ್ಸ್‌ಂಟ್ರೇಟರ್‌ಗಳನ್ನು ಒದಗಿಸಲಾಗಿದೆ.ಹೊಳಲ್ಕೆರೆ, ಚಿತ್ರದುರ್ಗ, ಹೊಸದುರ್ಗ ತಾಲೂಕುಗಳಲ್ಲಿ ಪ್ರತಿ ನಿತ್ಯ ಆಹಾರದ ಪ್ಯಾಕೆಟ್‌ ಮತ್ತು ನೀರಿನ ಬಾಟಲ್‌ಗ‌ಳನ್ನು ನೀಡಲಾಗುತ್ತಿದೆ.

ಹೊಳಲ್ಕೆರೆಯಲ್ಲೂ ಸ್ವಯಂಸೇವಕರ ತಂಡ: ಹೊಳಲ್ಕೆರೆ ತಾಲೂಕಿನಲ್ಲಿ ಜಯಸಿಂಹ ಖ್ವಾಟ್ರೋತ್‌ ನೇತೃತ್ವದಲ್ಲಿ ಇದೇ ಮಾದರಿಯಲ್ಲಿ ಒಂದು ತಂಡ ಅಂತ್ಯಸಂಸ್ಕಾರ ಮಾಡುವ ಸೇವೆಯಲ್ಲಿ ತೊಡಗಿಸಿಕೊಂಡಿದೆ. ತಾಲೂಕಿನ ಹಳ್ಳಿಗಳಿಗೂ ತೆರಳಿ ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಈವರೆಗೆ ಸುಮಾರು 40 ಜನರ ಅಂತ್ಯಕ್ರಿಯೆಯನ್ನು ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ್ದಾರೆ. ಒಟ್ಟಿನಲ್ಲಿ ಕೊರೊನಾದಿಂದ ಮೃತಪಟ್ಟವರ ಶವಗಳಿಗೆ ಮುಕ್ತಿ ದೊರಕಿಸುವ ಕಾರ್ಯ ಮಾಡುತ್ತಿರುವ ಸಂಘಟನೆಗಳ ಮಾನವೀಯ ಕಾರ್ಯ ಮಾದರಿ ಎಂದರೆ ತಪ್ಪಾಗಲಾರದು.

Advertisement

Udayavani is now on Telegram. Click here to join our channel and stay updated with the latest news.

Next