ಚಿತ್ರದುರ್ಗ: ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕೆ ಒತ್ತು ನೀಡಿದ್ದು, ಒಂದು ಲಕ್ಷ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ನಂದಿನಿದೇವಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ ಮತ್ತು ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಹೆಚ್ಚಿಸಲು ಸರ್ಕಾರದಿಂದ ಸೂಚನೆ ಬಂದಿದೆ ಎಂದರು.
ಜಿಲ್ಲೆಯಲ್ಲಿ 2021-22ನೇ ಸಾಲಿಗೆ ವಲಸೆ ಬಂದಿರುವ ಕೂಲಿ ಕಾರ್ಮಿಕರಿಗೆ 2323 ಉದ್ಯೋಗ ಚೀಟಿಗಳನ್ನು ನೀಡಲಾಗಿದೆ.ಈ ಬಾರಿ ಜಿಲ್ಲೆಗೆ 80 ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಲಾಗಿದ್ದು, 7,16,795 ಮಾನವ ದಿನಗಳನ್ನು ಈವರೆಗೆ ಸೃಜಿಸಲಾಗಿದೆ. ಪ್ರಸ್ತುತ ಕೃಷಿ ಇಲಾಖೆಗೆ 6 ಲಕ್ಷ, ತೋಟಗಾರಿಕೆ 5.20 ಲಕ್ಷ, ರೇಷ್ಮೆ 2 ಲಕ್ಷ, ಅರಣ್ಯ 10 ಲಕ್ಷ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಗೆ 2 ಲಕ್ಷ ಸೇರಿದಂತೆ ಒಟ್ಟು 25 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ನೀಡಲಾಗಿದೆ ಎಂದು ವಿವರಿಸಿದರು.
563 ಹಳ್ಳಿಗಳು ಕೊರೊನಾ ಮುಕ್ತ: ಜಿಲ್ಲೆಯ 563 ಹಳ್ಳಿಗಳು ಕೊರೊನಾದಿಂದ ಮುಕ್ತವಾಗಿವೆ. ಗ್ರಾಪಂ ಹಂತದ ಟಾಸ್ಕ್ಫೋರ್ಸ್ ಸಮಿತಿಗಳು ಸಕ್ರೀಯವಾಗಿ ಕೆಲಸ ಮಾಡುತ್ತಿವೆ ಎಂದು ಜಿಪಂ ಸಿಇಒ ಹೇಳಿದರು. ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಪ್ರಮಾಣ 2700 ರವರೆಗೆ ನಡೆಯುತ್ತಿದೆ. ಪ್ರಸ್ತುತ ಪಾಸಿಟಿವಿಟಿ ದರ ಶೇ. 16.8 ಇದ್ದು, ಸರಾಸರಿ ಪಾಸಿಟಿವಿಟಿ ದರ ಶೇ. 25.17 ರಷ್ಟು ಇದೆ. ಗ್ರಾಮಾಂತರ ಪ್ರದೇಶದಲ್ಲಿ 5195 ಸೋಂಕಿತರು ಹೋಂ ಐಸೋಲೇಶನ್‌ನಲ್ಲಿ ಇದ್ದಾರೆ ಎಂದರು.
“ನಮ್ಮ ನಡೆ ಹಳ್ಳಿಯ ಕಡೆ’ ಅಭಿಯಾನದಡಿ 74 ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿದ್ದು, 33,049 ಜನರನ್ನು ಪರೀಕ್ಷೆ ಮಾಡಿದ್ದೇವೆ. 2215 ಸಿಂಪ್ಟಮ್ಯಾಟಿಕ್ ಗುರುತಿಸಲಾಗಿದೆ. 2553 ಸ್ಯಾಂಪಲ್ ತೆಗೆದಿದ್ದು, 96 ಪ್ರಕರಣಗಳು ಪಾಸಿಟಿವ್ ಬಂದಿವೆ. ಸೋಂಕಿನ ಪ್ರಮಾಣ ಹೆಚ್ಚಾಗಿರುವ 28 ಹಳ್ಳಿಗಳನ್ನು ಗುರುತಿಸಲಾಗಿದೆ.
1 ರಿಂದ 5 ಸೋಂಕಿತರು ಇರುವ ಹಳ್ಳಿಗಳು ಗ್ರೀನ್ ಜೋನ್, 6 ರಿಂದ 10 ಸೋಂಕಿತರಿದ್ದರೆ ಯೆಲ್ಲೋ ಝೋನ್, 11 ರಿಂದ 19 ಆರೇಂಜ್ ಝೋನ್, 20 ಮೇಲ್ಪಟ್ಟು ಸೋಂಕಿತರು ಇರುವ ಹಳ್ಳಿಗಳನ್ನ ರೆಡ್ ಝೋನ್ ಎಂದು ಗುರುತಿಸಲಾಗಿದ್ದು, ಆದ್ಯತೆ ಮೇಲೆ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಎಚ್‌ಒ ಡಾ| ಸಿ.ಎಲ್. ಪಾಲಾಕ್ಷ, ನೋಡಲ್ ಅಧಿ ಕಾರಿ ಡಾ| ರಂಗನಾಥ್, ಜಿಲ್ಲಾ ಯೋಜನಾಧಿಕಾರಿ ಗಾಯತ್ರಿ ಮತ್ತಿತರ ಅ ಧಿಕಾರಿಗಳು ಇದ್ದರು.