ಚಳ್ಳಕೆರೆ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಫೆ.8 ಮತ್ತು 9 ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರೆ ನಡೆಯಲಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಜನಾಂಗದ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕು ಎಂದು ತಾಲೂಕು ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು.
ತಾಲೂಕಿನ ನನ್ನಿವಾಳ, ರಾಮಜೋಗಿಹಳ್ಳಿ ಮತ್ತು ಬಾಲೇನಹಳ್ಳಿ ಗ್ರಾಮಗಳಲ್ಲಿ ವಾಲ್ಮೀಕಿ ಜಾತ್ರೋತ್ಸವ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರೊಂದಿಗೆ ಸಮಾಲೋಚನಾ ಸಭೆ ನಡೆಸಿ ವಾಲ್ಮೀಕಿ ಜಾತ್ರೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ವಾಲ್ಮೀಕಿ ಜಾತ್ರೋತ್ಸವ
ಸಮುದಾಯದ ಅಭಿವೃದ್ಧಿಗೆ ವಿಶೇಷ ಆಯಾಮ ನೀಡಲಿದೆ ಎಂದು ತಿಳಿಸಿದರು.
ತಾಲೂಕು ವಾಲ್ಮೀಕಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಮಾತನಾಡಿ, ಜ.18ರಂದು ಚಳ್ಳಕೆರೆಯ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಶಾಸಕ ಟಿ.ರಘುಮೂರ್ತಿಯವರ ಅಧ್ಯಕ್ಷತೆಯಲ್ಲಿ ಜಾತ್ರೆ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು. ಸ್ವಾಮೀಜಿಯವರ ನೇತೃತ್ವದಲ್ಲಿ ಮೂರನೇ ಬಾರಿಗೆ ಈ ಜಾತ್ರೆ ಆಯೋಜಿಸಿದ್ದು, ನಾವೆಲ್ಲರೂ ಸಂಘಟಿತರಾಗಿ ಒಗ್ಗಟ್ಟಿನಿಂದ ಜಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಈ ಜನಾಂಗದ ಅಂತರಂಗದ ಶಕ್ತಿಯ ಅರಿವು ನಮಗೂ ಅರಿವಾಗುತ್ತದೆಯಲ್ಲದೆ, ಸಮಾಜಕ್ಕೂ ಸಹ ನಾವು ನಮ್ಮ ಸಂಘಟನೆಯ ಬಲದ ಬಗ್ಗೆ ಮಾಹಿತಿ ನೀಡಿದಂತಾಗುತ್ತದೆ ಎಂದರು. ವಾಲ್ಮೀಕಿ ಜಾತ್ರೆಗೆ ಹೆಚ್ಚು, ಹೆಚ್ಚು ಜನರು ಪಾಲ್ಗೊಳ್ಳುವಂತೆ ಮಾಡಬೇಕೆಂದು ವಾಲ್ಮೀಕಿ ಸಮುದಾಯದ ಮುಖಂಡರಾದ ದೊರೆ ಬೈಯಣ್ಣ, ರಾಜಣ್ಣ, ನೀರಗಂಟಿ ಪಾಪಣ್ಣ, ದೊರೆ ನಾಗರಾಜು, ಪಿಡಿಒ ಪಾಲಯ್ಯ, ರಾಘವೇಂದ್ರ ನಾಯಕ, ರಮೇಶ್, ಪಾಲಯ್ಯ, ಡಾ.ರಾಜು ಮುಂತಾದವರು ಮಾತನಾಡಿದರು.
ಶಿವಮ್ಮ, ಶಾರದಮ್ಮ, ಸಣ್ಣಬೋರಮ್ಮ, ಸಾವಿತ್ರಮ್ಮ, ಪ್ರಭಾವತಿ, ಚಿನ್ನಯ್ಯ, ಮಧು, ಓಬಯ್ಯ, ಸೂರ್ಯಪ್ರಭಾ, ಸುಮಂಗಳಮ್ಮ, ಸ್ವಪ್ನ ವೆಂಕಟೇಶ್, ಮಹಂತೇಶ್ ಮುಂತಾದವರು ಪಾಲ್ಗೊಂಡಿದ್ದರು.
ಓದಿ : ಬೈಕ್ ರ್ಯಾಲಿ ಮೂಲಕ ಸ್ವಾಗತ