ಚಿತ್ರದುರ್ಗ: ಕೋವಿಡ್ ಎರಡನೇ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ವೇದಾಂತ ಮೈನಿಂಗ್ ಸಹಯೋಗದಲ್ಲಿ ನಿರ್ಮಾಣವಾಗಿರುವ 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ಗುರುವಾರ ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯಕೀಯ ಸೇವೆ ಹಾಗೂ ಸೌಲಭ್ಯಗಳ ಹೆಚ್ಚಳಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಿರುವ ವೇದಾಂತ ಕೇರ್ ಕೋವಿಡ್ ಆಸ್ಪತ್ರೆಯ 100 ಹಾಸಿಗೆಗಳ ಪೈಕಿ 90 ಆಕ್ಸಿಜನೇಟೆಡ್ ಹಾಗೂ 10 ವೆಂಟಿಲೇಟರ್ ಗಳುಳ್ಳ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ ವೆಚ್ಚವನ್ನು ಸರ್ಕಾರ ಭರಿಸಲಿದೆ. ಈ ಆಸ್ಪತ್ರೆಯ ನಿರ್ವಹಣೆಯನ್ನು ಆರು ತಿಂಗಳ ಕಾಲ ವೇದಾಂತ ಕಂಪನಿಯವರು ಮಾಡಲಿದ್ದಾರೆ ಎಂದರು.
ಆರೋಗ್ಯ ಕೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ, ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆ. ಕೋವಿಡ್ ಮೂರನೇ ಅಲೆ ಎದುರಿಸಲು ಸರ್ಕಾರ ಸನ್ನದ್ಧವಾಗಿದ್ದು, ಎಲ್ಲ ರೀತಿಯ ಮೂಲ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೋವಿಡ್-19 ನಿರ್ವಹಣೆಗೆ ಸರ್ಕಾರ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿ ಜನರ ಜೀವ ರಕ್ಷಣೆಗೆ ಸೂಕ್ತ ಕ್ರಮಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ನಿಯಂತ್ರಣ ಹಾಗೂ ಕೋವಿಡ್‌ನಿಂದ ಉಂಟಾಗುತ್ತಿರುವ ಸಾವಿನ ಪ್ರಮಾಣವನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದರು. ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ. ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಮುಖ್ಯಮಂತ್ರಿಗಳು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ದಾವಣಗೆರೆ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 15 ರಿಂದ 20 ದಿನದೊಳಗೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಲಿದ್ದು, ಶೀಘ್ರದಲ್ಲಿಯೇ ಚಾಲನೆ ನೀಡಲಾಗುವುದು.
ಈ ಆಕ್ಸಿಜನ್ ಪ್ಲಾಂಟ್ ನಲ್ಲಿ 333 ಲೀಟರ್ ಫಾರ್ ಮಿನಿಟ್ ಆಕ್ಸಿಜನ್ ಉತ್ಪಾದನೆಯಾಗಲಿದೆ. ವರ್ಷದ 365 ದಿನವೂ ನಿರಂತರವಾಗಿ ನಡೆಯಲಿದೆ. ಇದರಿಂದ 50 ರಿಂದ 60 ಮಂದಿ ಕೋವಿಡ್ ರೋಗಿಗಳಿಗೆ ಪ್ರತಿನಿತ್ಯ ಆಕ್ಸಿಜನ್ ಪೂರೈಕೆಯಾಗಲಿದೆ ಎಂದು ತಿಳಿಸಿದರು.
ಸಂಸದ ಎ. ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಟಿ. ರಘುಮೂರ್ತಿ, ಎಂ. ಚಂದ್ರಪ್ಪ, ಜಿಲ್ಲಾಧಿ ಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜಿ. ರಾಧಿ ಕಾ ಮತ್ತಿತರರು ಇದ್ದರು.