ನಾಯಕನಹಟ್ಟಿ: ಲಾಕ್‌ಡೌನ್ ನಡುವೆಯೂ ಬೇಕಾಬಿಟ್ಟಿ ಸಂಚರಿಸುವ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಅಧಿಕಾರಿಗಳು ರಸ್ತೆಯಲ್ಲೇ ಕೋವಿಡ್ ಪರೀಕ್ಷೆ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ನಿಯಮ ಉಲ್ಲಂಘಿಸಿ ಓಡಾಡುವವರನ್ನು ಹೆದರಿಸಿ ಬೆದರಿಸಿ ರೋಸಿ ಹೋಗಿದ್ದ ಪೊಲೀಸರು ರಸ್ತೆಯಲ್ಲಿಯೇ ಕೋವಿಡ್ ಪರೀಕ್ಷೆ ಮಾಡುವ ಹೊಸ ಅಸ್ತ್ರ ಬಳಸಿದ್ದಾರೆ. ಕಳೆದ ಒಂದೆರಡು ದಿನಗಳಿಂದ ಬೇಕಾಬಿಟ್ಟಿಯಾಗಿ ಓಡಾಡುವ ವಾಹನಗಳಿಂದ ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರು ಬೇಸತ್ತಿದ್ದರು.
ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ತರುತ್ತಿದ್ದರು. ಹೀಗಿದ್ದರೂ ಜನರ ಓಡಾಟ ಕಡಿಮೆಯಾಗಿರಲಿಲ್ಲ. ನಾಯಕನಹಟ್ಟಿ ವ್ಯಾಪ್ತಿಯ ಸುತ್ತಲಿನ ಹಳ್ಳಿಗಳಲ್ಲಿ 145ಕ್ಕೂ ಜನರು ಕೊರೊನಾ ಸೋಂಕಿತರಿದ್ದಾರೆ.
ಹೀಗಾಗಿ ವಾಹನ ಹಾಗೂ ಜನ ಸಂಚಾರ ನಿಯಂತ್ರಣಕ್ಕೆ ಪೊಲೀಸರು, ಪಪಂ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯವರು ರಸ್ತೆಗಿಳಿದಿದ್ದರು. ಪಿಎಸ್‌ಐ ಮಹೇಶ್ ಲಕ್ಷ್ಮಣ ಹೊಸಪೇಟಿ ರಸ್ತೆಯಲ್ಲಿ ಅನವಶ್ಯಕವಾಗಿ ಓಡಾಡುವವರನ್ನು ತಡೆದು ಆರ್‌ಟಿಸಿಪಿಸಿಆರ್ ಪರೀಕ್ಷೆಗೆ ಒಳಪಡಿಸುತ್ತಿದ್ದರು.
ಹೀಗಾಗಿ ಮಧ್ಯಾಹ್ನದ ನಂತರ ಪಟ್ಟಣದ ಎಲ್ಲ ರಸ್ತೆಗಳು ಸಂಪೂರ್ಣವಾಗಿ ಖಾಲಿಯಾಗಿದ್ದವು. ಪಪಂ ಮುಖ್ಯಾ ಧಿಕಾರಿ ಕೋಡಿ ಭೀಮರಾಯ, ಡಾ| ಓಬಣ್ಣ, ಆರೋಗ್ಯ ನಿರೀಕ್ಷಕ ರುದ್ರಮುನಿ, ಲ್ಯಾಬ್ ಟೆಕ್ನಿಶಿಯನ್ ಮಂಜುನಾಥ್ ಮತ್ತಿತರರು ಇದ್ದರು.