ಚಿತ್ರದುರ್ಗ: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ದಿನ ಬಿಟ್ಟು ದಿನ ಲಾಕ್‌ಡೌನ್ ಹಾಗೂ ವೀಕೆಂಡ್ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಿದೆ. ಶನಿವಾರದ ಲಾಕ್‌ಡೌನ್ ಗೆ ಚಿತ್ರದುರ್ಗ ನಗರದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಜಿಲ್ಲಾಡಳಿತದ ಆದೇಶದಂತೆ ವೀಕೆಂಡ್ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆ ಬೆಳಗ್ಗೆಯಿಂದಲೇ ಜನರ ಓಡಾಟ ತೀರಾ ವಿರಳವಾಗಿತ್ತು. ಹಾಲು, ವೈದ್ಯಕೀಯ ಹಾಗೂ ತುರ್ತು ಸೇವೆ ಹೊರತುಪಡಿಸಿ ಮತ್ತಿತರ ಎಲ್ಲಾ ಚಟುವಟಿಕೆಗಳು ಬಂದ್ ಆಗಿದ್ದವು. ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ನಗರದ ನಾನಾ ಚೆಕ್ ಪೋಸ್ಟ್ ಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
ಅಲ್ಲದೇ ಪೊಲೀಸ್ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಕೂಡ ನಡೆಸಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಯಿತು. ವೀಕೆಂಡ್ ಲಾಕ್‌ಡೌನ್ ನಲ್ಲಿ ದಿನಸಿ ಹಾಗೂ ತರಕಾರಿ ವಹಿವಾಟಿಗೂ ಅವಕಾಶ ನೀಡದ ಕಾರಣ ಮುಖ್ಯ ರಸ್ತೆಗಳು ಸೇರಿದಂತೆ ನಗರದ ಎಲ್ಲಾ ರಸ್ತೆಗಳು ವಾಹನಗಳ ಸಂಚಾರ ಹಾಗೂ ಜನರ ಓಡಾಟ ಇಲ್ಲದೆ ಬಿಕೋ ಎನ್ನುತ್ತಿದ್ದವು. ತುರ್ತು ಸೇವೆಗಳಿಗಾಗಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ ಹಾಗೂ ಲಸಿಕೆ ಹಾಕಿಸಿಕೊಳ್ಳುವುದಕ್ಕಾಗಿ ಕೆಲವರು ರಸ್ತೆಗೆ ಇಳಿದಿದ್ದರು.
ಅಲ್ಲೊಂದು ಇಲ್ಲೊಂದು ವಾಹನಗಳು ಮಾತ್ರ ಸಂಚರಿಸಿದವು. ಜಿಲ್ಲೆಯಾದ್ಯಂತ ಕೋವಿಡ್ 19 ಕರ್ಫ್ಯೂ ಜಾರಿಯಲ್ಲಿದ್ದರೂ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿದ ಒಟ್ಟು 116 ಮಂದಿ ವಿರುದ್ಧ ಶುಕ್ರವಾರ 22 ಪ್ರಕರಣ ದಾಖಲಿಸಿ, 109 ವಾಹನಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ 182 ಜನರಿಗೆ ಒಟ್ಟು 18,200 ರೂ. ದಂಡ ವಿಧಿ ಸಲಾಗಿದೆ.
ಇದರಲ್ಲಿ ಮಾಸ್ಕ್ ಧರಿಸದ 178 ಮಂದಿಯ ಮೇಲೆ 17,800 ಹಾಗೂ ಸಾಮಾಜಿಕ ಅಂತರ ಕಾಪಾಡದ ನಾಲ್ವರ ಮೇಲೆ 400 ರೂ. ದಂಡ ವಿ ಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.