Advertisement

ಪಾಸಿಟಿವಿಟಿ ದರ ಶೇ.20ಕ್ಕೆ ಏರಿಕೆ

09:23 PM May 30, 2021 | Team Udayavani |

ಚಿತ್ರದುರ್ಗ: ತಾಲೂಕಿನಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ. 4 ರಿಂದ 20ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಕೋವಿಡ್‌ ನಿಯಂತ್ರಣ ಕಷ್ಟವಾಗಲಿದೆ. ಒಬ್ಬ ಸೋಂಕಿತನಿಗೆ 20 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಮಾಡಬೇಕು ಎಂದು ತಹಶೀಲ್ದಾರ್‌ ಜೆ.ಸಿ. ವೆಂಕಟೇಶಯ್ಯ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ನೋಡಲ್‌ ಅ ಧಿಕಾರಿಗಳ ಸಭೆಯಲ್ಲಿ ಕೋವಿಡ್‌ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಮನೆಯಲ್ಲಿರುವ ಕೋವಿಡ್‌ ಸೋಂಕಿತರನ್ನು ಮನವೊಲಿಸಿ ಕೇರ್‌ ಸೆಂಟರ್‌ಗಳಿಗೆ ಕರೆತರುವ ಕೆಲಸ ಮಾಡಬೇಕು. ಹೋಂ ಕ್ವಾರಂಟೈನ್‌ನಲ್ಲಿರುವವರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ನೋಡಲ್‌ ಅ ಧಿಕಾರಿಗಳಿಗೆ ತಿಳಿಸಿದರು. ಸೋಂಕಿತರಿಗೆ ಅವರ ಮನೆಯಲ್ಲಿರಲು ಪ್ರತ್ಯೇಕ ಕೊಠಡಿ, ಶೌಚಾಲಯ, ವಾಷ್‌ ಬೇಸಿನ್‌ ವ್ಯವಸ್ಥೆ ಇದ್ದರೆ ಮಾತ್ರ ಮನೆಯಲ್ಲಿರಲು ಅವಕಾಶ ಕೊಡಿ, ಅಂಥವರಿಗೆ ಸ್ಟಿಕ್ಕರ್‌ ಅಂಟಿಸಿ ಮನೆಯಿಂದ ಹೊರಗೆ ಬಾರದಂತೆ ತಿಳಿಹೇಳಿ ಬನ್ನಿ ಎಂದರು. ಗ್ರಾಮ ಮಟ್ಟದಲ್ಲಿ ಪಿಡಿಒ, ಬಿಲ್‌ ಕಲೆಕ್ಟರ್‌, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು ತಂಡವಾಗಿ ಕೆಲಸ ಮಾಡಿದಾಗ ಮಾತ್ರ ತಾಲೂಕಿನಲ್ಲಿ ಕೊರೊನಾ ಸೋಂಕು ಹತೋಟಿಗೆ ತರಬಹುದು ಎಂದು ಹೇಳಿದರು.

ಹಳ್ಳಿಗಳಲ್ಲಿ ಕಡ್ಡಾಯವಾಗಿ ಎಲ್ಲರಿಗೂ ತಪಾಸಣೆ ಮಾಡಿದರೆ ಸೋಂಕಿತರು ಗೊತ್ತಾಗುತ್ತಾರೆ. ಎಲ್ಲಾ ಕೈಮೀರಿ ಹೋದಾಗ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಬಂದರೆ ಏನು ಪ್ರಯೋಜನ? ಚಿತ್ರದುರ್ಗ ತಾಲೂಕಿನಲ್ಲಿ ಸೋಂಕು ಜಾಸ್ತಿಯಾಗುತ್ತಿದೆ. ಹೆಚ್ಚು ಪ್ರಕರಣಗಳಿರುವ ಕಡೆ ಕಂಟೇನ್ಮೆಂಟ್‌ ಜೋನ್‌ ಮಾಡಿ, ಈಗಾಗಲೆ ಎರಡು ತಿಂಗಳ ರೇಷನ್‌ ಕೊಟ್ಟಿದ್ದೇವೆ. ತರಕಾರಿ ಗಾಡಿಯವರು ಮಾತ್ರ ಅಲ್ಲಿಗೆ ಹೋದರೆ ಖರೀದಿ ಸಲಿ. ವಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿಕೊಂಡು ದಿನನಿತ್ಯವೂ ನಮಗೆ ಮಾಹಿತಿ ಕೊಡಿ. ಗ್ರಾಮಗಳಲ್ಲಿ ಹೈಡ್ರೋಕ್ಲೋರೈಡ್‌ ಸಿಂಪಡಿಸಿ ಎಂದು ತಾಕೀತು ಮಾಡಿದರು.

ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರನಾಯ್ಕ ಮಾತನಾಡಿ, ತಾಲೂಕಿನಲ್ಲಿ ಕೊರೊನಾ ನಿಗ್ರಹಕ್ಕಾಗಿ ರಚಿಸಿರುವ ಕಮಿಟಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಗ್ರಾಮ ಬೂತ್‌ ಮಟ್ಟದಲ್ಲಿ ನಿಗಾವಹಿಸಿ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಬೇಕಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರೂಪ್‌ ಮಾಡಿಕೊಂಡು ಬೀದಿ ಬೀದಿಯಲ್ಲಿ ಸುತ್ತಾಡಿ ಗ್ರಾಮಸ್ಥರಲ್ಲಿ ಕೊರೊನಾ ವಿರುದ್ಧ ಅರಿವು ಮೂಡಿಸಿ. ಎಲ್ಲರೂ ಮಾಸ್ಕ್ ಧರಿಸಿದ್ದಾರಾ ಎನ್ನುವುದನ್ನು ಗಮನಿಸಿ ಎಲ್ಲಾದರೂ ಗುಂಪು ಗುಂಪಾಗಿ ಜನ ಸೇರಿದ್ದರೆ ನನ್ನ ಗಮನಕ್ಕೆ ತನ್ನಿ. ಇಲ್ಲವೇ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ತಿಳಿಸಿ. ಮೈಮರೆತು ಕೂತರೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂದು ನೋಡಲ್‌ ಅಧಿ ಕಾರಿಗಳಿಗೆ ಹೇಳಿದರು.

ತಾಲೂಕು ವೈದ್ಯಾಧಿ ಕಾರಿ ಡಾ.ಗಿರೀಶ್‌ ಮಾತನಾಡಿ ಚಿತ್ರದುರ್ಗ ತಾಲೂಕಿನ ಮಾನಂಗಿ, ಕಾಸವರಹಟ್ಟಿಯ ಲಂಬಾಣಿಹಟ್ಟಿಯನ್ನು ಕಂಟೈನ್‌ ಮೆಂಟ್‌ ಝೋನ್‌ ಆಗಿ ಮಾಡಿ. ಬ್ಯಾರಿಕೇಡ್‌ ಹಾಕಲಾಗಿದೆ. ಹೊರಗಡೆಯಿಂದ ಯಾರು ಬರುವಂತಿಲ್ಲ. ಸಂಪೂರ್ಣ ಬ್ಲಾಕ್‌ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ಹತ್ತು ದಿನಗಳ ಕಾಲ ಸರ್ವೇ ನಡೆಸಿ ಪಾಸಿಟಿವ್‌ ಇದ್ದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆತನ್ನಿ. ನೆಗೆಟಿವ್‌ ಇದ್ದವರಿಗೆ ಪೌಚ್‌, ಮಾತ್ರೆಗಳನ್ನು ನೀಡುತ್ತೇವೆ. ಗ್ರಾಮ ಮಟ್ಟದ ಟಾಸ್ಕ್ಫೋರ್ಸ್‌ನಲ್ಲಿ ಉಸ್ತುವಾರಿ ವಹಿಸಿ ದಿನಕ್ಕೆ ಎಷ್ಟು ಪಾಸಿಟಿವ್‌ ಕೇಸ್‌ ಪತ್ತೆಯಾಗಿದೆ. ಕಡಿಮೆಯಾಗಿರುವುದೆಷ್ಟು ಎನ್ನುವ ಮಾಹಿತಿಯನ್ನು ಕಡ್ಡಾಯವಾಗಿ ಕೊಡಲೇಬೇಕೆಂದು ತಿಳಿಸಿದರು. ಚಿತ್ರದುರ್ಗ ತಾಲೂಕಿನಲ್ಲಿ 47 ಮಂದಿ ಮೃತಪಟ್ಟಿದ್ದಾರೆ.

Advertisement

ಇದರಲ್ಲಿ ಕೊರೊನಾದಿಂದ ಮೃತಪಟ್ಟವರು 15. ಉಳಿದ 32 ಮಂದಿ ಬೇರೆ ಬೇರೆ ಕಾರಣದಿಂದ ಸಾವನ್ನಪ್ಪಿದ್ದಾರೆ. ಕೋವಿಡ್‌ ಸೋಂಕಿತರನ್ನು ಏಳು ದಿನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿಡಬಹುದು. ಮತ್ತೆ ಏಳು ದಿನ ಮನೆಯಲ್ಲಿ ಕ್ವಾರಂಟೈನ್‌ನಲ್ಲಿರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಬಿಗಿ ನಿಲುವು ತೆಗೆದುಕೊಳ್ಳಿ. ಇಲ್ಲದಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರುವುದಿಲ್ಲ ಎಂದು ಎಚ್ಚರಿಸಿದರು. ತಾಲೂಕು ನೋಡಲ್‌ ಅ ಧಿಕಾರಿ ಕೃಷ್ಣಪ್ರಸಾದ್‌, ತಾಪಂ ಇಒ ಹನುಮಂತಪ್ಪ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next