ಚಿತ್ರದುರ್ಗ: ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೇ 26 ರಿಂದ ಜೂನ್ 7 ರಂದು ಬೆಳಗ್ಗೆ 6 ಗಂಟೆಯವರೆಗೆ ದಿನ ಬಿಟ್ಟು ದಿನ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದೆ.
ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಇರುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ತಿಳಿಸಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 27, 29, 30 ಹಾಗೂ ಜೂನ್ 1, 3, 5 ಹಾಗೂ 6 ರಂದು ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಧಿಸಲಾಗಿದೆ.
ಈ ದಿನಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸೇವೆಗಳಿರುವುದಿಲ್ಲ. ತರಕಾರಿ, ಹಣ್ಣು, ದಿನಸಿ ಅಂಗಡಿಗಳೂ ಇರುವುದಿಲ್ಲ. ಹಾಲಿನ ಉತ್ಪನ್ನಗಳು ಮಾತ್ರ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಇರುತ್ತವೆ. ಮೇ 26, 28, 31 ಹಾಗೂ ಜೂನ್ 2 ಹಾಗೂ 4 ರಂದು ಬೆಳಗ್ಗೆ 6 ರಿಂದ 10 ರವರೆಗೆ ಸಂಪೂರ್ಣ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದೆ.
ಲಾಕ್ ಡೌನ್ ವಿನಾಯಿತಿ ದಿನಗಳಂದು ಬೆಳಿಗ್ಗೆ 06 ರಿಂದ 10 ರವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಸಂಪೂರ್ಣ ಲಾಕ್ ಡೌನ್ ವಿಧಿಸಿರುವ ದಿನಗಳಂದು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ರವರೆಗೆ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ತುರ್ತು ಸೇವೆಗಳು, ಎಲ್ಲಾ ಆಸ್ಪತ್ರೆ, ಮೆಡಿಕಲ್ಸ…, ಪೆಟ್ರೋಲ್ ಬಂಕ್, ಇ-ಕಾಮರ್ಸ, ತಿಂಡಿ ಮತ್ತು ಊಟ ಪಾರ್ಸಲ್ ಸೇವೆಗಳು, ಗೂಡ್ಸ… ವಾಹನಗಳ ಸಂಚಾರ, ದಿನಸಿ ಪಾರ್ಸೆಲ್ ಸೇವೆಗಳು, ಸರ್ಕಾರದ ಮೇ 7 ಮತ್ತು 21ರಂದು ಇನ್ನಿತರೆ ಹೆಚ್ಚುವರಿ ಆದೇಶದಲ್ಲಿ ಉಲ್ಲೇಖೀಸಿರುವಂತೆ ನಿರಂತರ ಉತ್ಪಾದನಾ ಕೈಗಾರಿಕೆ, ಉದ್ದಿಮೆಗಳ ಸೇವೆ ಪಡೆಯಬಹುದಾಗಿದೆ.
ಸಂಪೂರ್ಣ ಲಾಕ್ ಡೌನ್ ಹೊರತಾದ ದಿನಗಳಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮೇ 7 ಮತ್ತು 21ರಂದು ಇನ್ನಿತರೆ ಹೆಚ್ಚುವರಿ ಆದೇಶಗಳಲ್ಲಿ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ನಿರ್ಬಂಧಿಸಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಈ ಆದೇಶದ ಜೊತೆಗೆ ಈಗಾಗಲೇ ಸಿ.ಆರ್.ಪಿ.ಸಿ 144 ರಡಿಯಲ್ಲಿ ಹೊರಡಿಸಿರುವ ನಿಷೇಧಾಜ್ಞೆ ಆದೇಶ ಸಹ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ ಇದ್ದರು.