ಚಿತ್ರದುರ್ಗ: ಕೊರೊನಾ ಎರಡನೇ ಅಲೆಯ ಸಂಕೀರ್ಣ ಸಂದರ್ಭದಲ್ಲಿ ಬಡವರು, ದೀನರು, ದುಃಖೀತರಿಗೆ ಆಹಾರದ ಕಿಟ್ ವಿತರಣೆಗೆ ಮುರುಘಾ ಮಠ ಮುಂದಾಗಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಮುರುಘಾ ಮಠದ ಆವರಣದಲ್ಲಿ ಶನಿವಾರ ನೂರಕ್ಕೂ ಹೆಚ್ಚು ಜನರಿಗೆ ಗೋಧಿ, ಅಕ್ಕಿ, ಎಣ್ಣೆ ಸೇರಿದಂತೆ ದಿನಬಳಕೆಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದರು. ಕೋವಿಡ್ 19 ಸಂದರ್ಭದಲ್ಲಿ ಕಳೆದ ವರ್ಷವೂ ಸತತ ಒಂದು ತಿಂಗಳ ಕಾಲ ಮುರುಘಾ ಮಠದಿಂದ ಬಡವರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿತ್ತು. ಈ ವರ್ಷ ಕೂಡ ಅದನ್ನು ಮುಂದುವರೆಸಲಾಗುವುದು.
ಕೋವಿಡ್ ಲಾಕ್ ಡೌನ್ ಜೂನ್ 7 ರವರೆಗೆ ಮುಂದುವರೆಯುತ್ತಿರುವುದರಿಂದ ಯಾರೂ ಬದುಕಿಗಾಗಿ ಕಷ್ಟಪಡಬಾರದು ಎಂಬ ಕಾರಣಕ್ಕೆ ಅಗತ್ಯ ಆಹಾರದ ಪರಿಕರಗಳನ್ನು ನೀಡುತ್ತಿದ್ದೇವೆ ಎಂದರು.
ಪ್ರತಿ ದಿನವೂ ಒಂದೊಂದು ವರ್ಗದ ಜನರಿಗೆ ಆಹಾರದ ಕಿಟ್ ವಿತರಣೆ ಮಾಡಲಾಗುವುದು. ಮೊದಲ ದಿನ ಸವಿತಾ ಸಮಾಜದ ಸುಮಾರು 100ಕ್ಕೂ ಹೆಚ್ಚು ಜನರಿಗೆ ಆಹಾರ ಕಿಟ್ ನೀಡಿದ್ದೇವೆ. ಮೊದಲ ದಿನದ ಈ ಸೇವೆಗೆ ಎಸ್‌ಜೆಎಂ ಬ್ಯಾಂಕ್ ಕೈಜೋಡಿಸಿದೆ. ಸಂಕಷ್ಟದಲ್ಲಿರುವ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಇದೇ ರೀತಿ ದಿನವೂ ಒಂದೊಂದು ಸಂಘ-ಸಂಸ್ಥೆಯವರು ಮುಂದೆ ಬಂದು ಈ ಸೇವೆ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಜೆ.ಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್, ಹಾಲಪ್ಪ ನಾಯಕ, ಬಸವರಾಜ ಗಡ್ಡೆಪ್ಪನವರ ಇದ್ದರು.