Advertisement

ಕೊರೊನಾ ಸೋಂಕಿತರಿಗೆ ತರಳಬಾಳು ಶ್ರೀಗಳ ಅಭಯ

09:24 PM May 19, 2021 | Team Udayavani |

ಸಿರಿಗೆರೆ: ಕೊರೊನಾ ಸೋಂಕಿತರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ತರಳಬಾಳು ಬ್ರಹನ್ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಈಗ ಕೊರೊನಾ ಸೋಂಕಿತರೊಂದಿಗೆ ಪ್ರತಿನಿತ್ಯ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುತ್ತಿದ್ದಾರೆ.

Advertisement

ಕೊರೊನಾ ಸೋಂಕು ಹಳ್ಳಿಗಳಿಗೆ ದಾಳಿ ಇಡುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಮುಂದಾಗಿರುವ ಶ್ರೀಗಳು, ಸ್ಥಳೀಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸಾ ಸೌಲಭ್ಯಗಳನ್ನು ದೊರಕಿಸಿಕೊಡುತ್ತಿದ್ದಾರೆ. ಬೆಂಗಳೂರು ಮಹಾನಗರದಿಂದ ಸುತ್ತಲಿನ ಹಳ್ಳಿಗಳಿಗೆ ಹಿಂದಿರುಗಿದ ಯುವಕರನ್ನು ಗ್ರಾಮ ಪಂಚಾಯಿತಿ ಮೂಲಕ ಪತ್ತೆ ಮಾಡಿಸಿ ಅವರು ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಗಾಗುವಂತೆ ಮಾಡಿದ್ದಾರೆ. ಅಲ್ಲದೆ ಹೋಂ ಕ್ವಾರಂಟೈನ್‌ ಆಗಿರುವಂತೆ ನೋಡಿಕೊಳ್ಳುತ್ತಿದ್ದಾರೆ.

ಆದಾಗ್ಯೂ ಎರಡನೇ ಅಲೆ ಹಳ್ಳಿಗಳಲ್ಲಿ ಹರಡುತ್ತಿದೆ. ಸಿರಿಗೆರೆ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವ ಎಲ್ಲಾ ರೋಗಿಗಳ ವಿವರಗಳನ್ನು ಸಂಗ್ರಹಿಸಿ ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡಿರುವ ಶ್ರೀಗಳು, ನಿತ್ಯವೂ ಸೋಂಕಿತರಿಗೆ ದೂರವಾಣಿ ಕರೆ ಮಾಡಿ ಅವರಲ್ಲಿ ಧೈರ್ಯ ತುಂಬುತ್ತಿದ್ದಾರೆ.

ಹೊಸದಾಗಿ ಯಾರಿಗಾದರೂ ಸೋಂಕು ತಗುಲಿದರೆ ಅವರ ಮಾಹಿತಿ ಪಡೆದು ಅವರನ್ನು ಮಾತನಾಡಿಸುವ ಜೊತೆಗೆ ಚಿಕಿತ್ಸೆಗೆ ವ್ಯವಸ್ಥೆಯನ್ನೂ ಮಾಡುತ್ತಿದ್ದಾರೆ.

ಆಕ್ಸಿಜನ್‌ ಲೆವೆಲ್‌ ಪರಿಶೀಲನೆ ಕಡ್ಡಾಯ: “ನಾವು ಕಣೋ ಗುರುಗಳು ಮಾತಾಡೋದು, ಹೇಗಿದ್ದೀಯಾ, ಏನೂ ತೊಂದರೆ ಇಲ್ಲಾ ತಾನೇ, ಸರಿಯಾಗಿ ಔಷಧ  ತಗೋಳ್ತಾ ಇದೀಯಲ್ವ, ಏನೂ ಆಗಲ್ಲ. ಧೈರ್ಯವಾಗಿರು, ನಿನ್ನ ಆರೋಗ್ಯ ಸುಧಾರಿಸುತ್ತೆ’ ಎಂದು ತರಳಬಾಳು ಶ್ರೀಗಳು ಸೋಂಕಿತರಿಗೆ ಕರೆ ಮಾಡಿ ಧೈರ್ಯ ಹೇಳುತ್ತಿದ್ದಾರೆ.

Advertisement

ಸೋಂಕಿತರು ಆಕ್ಸಿಜನ್‌ ಲೆವೆಲ್‌ ಪರಿಶೀಲನೆ ಮಾಡಿಕೊಳ್ಳಲು ತಮ್ಮ ಬಳಿ ಆಕ್ಸಿಮೀಟರ್‌ ಇಟ್ಟುಕೊಳ್ಳುವುದನ್ನು ಕಡ್ಡಾಯ ಮಾಡಿರುವ ಶ್ರೀಗಳು, ದಿನದಲ್ಲಿ ಮೂರು ಬಾರಿ ಸೋಂಕಿತರು ಆಕ್ಸಿಜನ್‌ ಲೆವೆಲ್‌ ಮಾಹಿತಿಯನ್ನು ವಾಟ್‌ ಆ್ಯಪ್‌ ಮೂಲಕ ಶ್ರೀಗಳಿಗೆ ಕಳುಹಿಸಿಕೊಡಬೇಕು.

ಅದನ್ನು ಆಧಾರವಾಗಿಟ್ಟುಕೊಂಡು ಸ್ವಾಮೀಜಿಯವರು ಪರಿಣಿತ ವೈದ್ಯರನ್ನು ಸಂಪರ್ಕಿಸಿ ಸೋಂಕಿತರು ಅನುಸರಿಸಬೇಕಾದ ಚಿಕಿತ್ಸಾ ವಿಧಾನಗಳ ಮಾಹಿತಿ ಪಡೆದು ತಿಳಿವಳಿಕೆ ನೀಡುತ್ತಾರೆ. ಜೊತೆಗೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಚಿತ್ರದುರ್ಗ, ದಾವಣಗೆರೆ,1 ಬೆಂಗಳೂರು ಮುಂತಾದ ನಗರಗಳ ಪ್ರಖ್ಯಾತ ವೈದ್ಯರನ್ನು ಸಂಪರ್ಕಿಸಿ ಬೆಡ್‌, ಆಕ್ಸಿಜನ್‌, ವೆಂಟಿಲೇಟರ್‌ ಸೌಲಭ್ಯ ದೊರೆಯುವಂತೆ ಮಾಡುತ್ತಿದ್ದಾರೆ.

ತುರ್ತು ಚಿಕಿತ್ಸೆಯ ಅಗತ್ಯ ಇರುವವರು ಬಳಸಿಕೊಳ್ಳಲು ಮಠದ ಆವರಣದಲ್ಲಿ ಸದಾ ಕಾಲ ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿದ್ದಾರೆ. ಚಿತ್ರದುರ್ಗ ಮತ್ತು ದಾವಣಗೆರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ಅಗತ್ಯ ಇರುವವರು ಉಚಿತವಾಗಿ ಈ ವಾಹನ ಬಳಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next