ನಾಯಕನಹಟ್ಟಿ: ಕೊರೊನಾ ಆತಂಕದ ನಡುವೆಯೂ ಚಿತ್ರದುರ್ಗ ಜಿಲ್ಲೆಯಾದ್ಯಾಂತ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಜೂನ್ 21 ರಿಂದ ಆರಂಭವಾಗಬೇಕಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಹಾಗೂ ನಿರಂತರತೆಯನ್ನು ಕಾಪಾಡುವ ಉದ್ದೇಶದಿಂದ ಆನ್‌ಲೈನ್ ಪರೀಕ್ಷೆ ನಡೆಯಿತು. ಪ್ರತಿ ಶಾಲೆಯ ಮುಖ್ಯಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ವಾಟ್ Õಆ್ಯಪ್ ಗ್ರೂಪ್‌ಗ್ಳನ್ನು ರಚಿಸಿದ್ದಾರೆ.
ಪರೀಕ್ಷೆ ಆರಂಭವಾಗುವ ಬೆಳಗ್ಗೆ 10 ಗಂಟೆಗೆ ಮುಖ್ಯಶಿಕ್ಷಕರ ಮೊಬೈಲ್‌ಗೆ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಯಿತು. ಮುಖ್ಯಶಿಕ್ಷಕರು ಪ್ರಶ್ನೆಪತ್ರಿಕೆಯನ್ನು ವಿದ್ಯಾರ್ಥಿಗಳ ಗುಂಪಿಗೆ ಶೇರ್ ಮಾಡಿದರು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಕುಳಿತು ಪರೀಕ್ಷೆ ಬರೆದರು.
ಆಯಾ ಶಾಲೆಯ ಮುಖ್ಯಶಿಕ್ಷಕರು ಹಾಗೂ ವಿಷಯ ಶಿಕ್ಷಕರು ವಿದ್ಯಾರ್ಥಿಗಳ ಮೊಬೈಲ್ ವಿಡಿಯೋ ಆನ್ ಮಾಡಿಕೊಂಡು ವಿದ್ಯಾರ್ಥಿಗಳನ್ನು ಪರಿಶೀಲನೆ ಮಾಡಲು ಸಾಧ್ಯವಿದೆ. ಪರೀಕ್ಷೆ ಅವ ಧಿ ಮುಗಿದ ತಕ್ಷಣ ವಿದ್ಯಾರ್ಥಿಗಳು ಉತ್ತರಪತ್ರಿಕೆಯನ್ನು ಸ್ಕಾನ್ ಅಥವಾ ಫೋಟೋ ತೆಗೆದು ವಿಷಯವಾರು ಶಿಕ್ಷಕರ ಅಥವಾ ಮುಖ್ಯಶಿಕ್ಷಕರ ಮೊಬೈಲ್‌ಗೆ ಕಳಿಸುತ್ತಾರೆ. ಕೆಲವು ಶಾಲೆಗಳು ವಾಟ್ಸ್‌ಆ್ಯಪ್ ಮೂಲಕ ಪ್ರಶ್ನೆಪತ್ರಿಕೆ ಕಳಿಸಿವೆ.
ಅನೇಕ ಶಾಲೆಗಳು ಗೂಗಲ್ ಮೀಟ್ ಮತ್ತು ಝೂಮ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರ ಮೇಲ್ವಿಚಾರಣೆ ನಡೆಸಿದರು. ಚಿತ್ರದುರ್ಗ ತಾಲೂಕಿನ 106, ಚಳ್ಳಕೆರೆ 75, ಹಿರಿಯೂರು 73, ಹೊಳಲ್ಕೆರೆ 47, ಹೊಸದುರ್ಗ 52 ಹಾಗೂ ಮೊಳಕಾಲ್ಮೂರು ತಾಲೂಕಿನ 34 ಶಾಲೆಗಳು ಸೇರಿದಂತೆ ಜಿಲ್ಲೆಯ 450 ಶಾಲೆಗಳಲ್ಲಿ 387 ಶಾಲೆಗಳ ವಿದ್ಯಾರ್ಥಿಗಳು ಇಂದಿನ ಆನ್‌ಲೈನ್ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. 127 ಸರಕಾರಿ ಶಾಲೆಗಳು, 121 ಅನುದಾನಿತ ಶಾಲೆಗಳು ಹಾಗೂ 78 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರು. ಜಿಲ್ಲೆಯ 18,815 ವಿದ್ಯಾರ್ಥಿಗಳಲ್ಲಿ 15,691 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ಆನ್ ಲೈನ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ಮಾಹಿತಿ ಕೆಲವು ವಿದ್ಯಾರ್ಥಿಗಳಿಗೆ ತಲುಪಿಲ್ಲ. ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ ಎನ್ನುವುದು ಇಲಾಖೆ ಅಭಿಪ್ರಾಯ.
ಒಟ್ಟಾರೆ ಜಿಲ್ಲೆಯಲ್ಲಿ ಶೇ. 83.3 ವಿದ್ಯಾರ್ಥಿಗಳು ಆನ್‌ಲೈನ್ ಪರೀಕ್ಷೆ ಬರೆದಿದ್ದಾರೆ. ಮೇ 18ರಂದು ಗಣಿತ, 19 ರಂದು ಇಂಗ್ಲಿಷ್, 20 ರಂದು ವಿಜ್ಞಾನ, 21 ರಂದು ಹಿಂದಿ, 22 ರಂದು ಸಮಾಜ ವಿಜ್ಞಾನ ಪರೀಕ್ಷೆಗಳು ಜರುಗಲಿವೆ. ಕೊರೊನಾ ಸಂಕಷ್ಟದ ನಡುವೆಯೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಖಾತ್ರಿಗೊಳಿಸಲು ಶಿಕ್ಷಣ ಇಲಾಖೆ ಹೊಸ ಹೆಜ್ಜೆ ಇರಿಸಿದೆ.