ಚಿತ್ರದುರ್ಗ: ಜಿಲ್ಲೆಯ ಕೋವಿಡ್ ಆಸ್ಪತ್ರೆಯ ಐಎಲ್‌ಐ, ಸಾರಿ ಪ್ರಕರಣಗಳಿರುವ ವಾಡ್ ಗಳಿಗೆ ರೋಗಿಯ ಜತೆಗಿರಲು ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಸಂಬಂಧಿ ಕರಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಸೂಚಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ವೇಳೆ ಐಎಲ್‌ಐ, ಸಾರಿ ವಾರ್ಡ್‌ಗಳಲ್ಲಿ ರೋಗಿಯ ಜೊತೆಗೆ ಒಬ್ಬರು, ಇಬ್ಬರು ಅವರ ಸಂಬಂಧಿ ಕರು ಬೆಡ್ ಪಕ್ಕದಲ್ಲಿಯೇ ಇದ್ದರು.
ಇಲ್ಲಿಂದ ಮನೆಗೆ ಹೋಗಿ ಎಲ್ಲರೊಂದಿಗೆ ಇರುತ್ತಾರೆ. ಇದರಿಂದ ಕೊರೊನಾ ಹರಡುತ್ತದೆ ಎಂದು ಎಚ್ಚರಿಸಿದರು. ಜಿಲ್ಲಾಸ್ಪತ್ರೆ ಒಳಗೆ ರೋಗಿಯನ್ನು ಹೊರತುಪಡಿಸಿ ಅವರ ಜೊತೆ ಬರುವವರನ್ನು ಒಳಗಡೆ ಬಿಡಬಾರದು. ಈ ಬಗ್ಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕ್ರಮ ಕೈಗೊಳ್ಳಲು ಜಿಲ್ಲಾ ರಕ್ಷಣಾ ಧಿಕಾರಿಗೆ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದರೂ ತೆರವು ಮಾಡದೇ ವಾರ್ಡ್‌ನಲ್ಲಿಯೇ ಬಿಡಲಾಗಿದೆ. ಈ ವೇಳೆ ಡಾಕ್ಟರ್, ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ಯಾರೂ ಇರಲಿಲ್ಲ. ಈ ಬಗ್ಗೆ ಕರ್ತವ್ಯದಲ್ಲಿದ್ದ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಂಡು ಆದೇಶ ಪ್ರತಿ ನೀಡಲು ಸೂಚನೆ ನೀಡಿದರು.
ಹೆಚ್ಚುವರಿ ಬೆಡ್‌ಗೆ ಕ್ರಮ: ಕೋವಿಡ್ ಎರಡನೇ ಅಲೆ ಹೆಚ್ಚಾಗುತ್ತಿದ್ದು ಈಗಿರುವ ಬೆಡ್‌ಗಳು ಭರ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದೆ ಇನ್ನೂ ಹೆಚ್ಚಾದಲ್ಲಿ ಅದನ್ನು ಎದುರಿಸಲು ಹೆಚ್ಚುವರಿ ಬೆಡ್‌ಗಳನ್ನು ನಿರ್ಮಾಣ ಮಾಡಿಟ್ಟುಕೊಳ್ಳಬೇಕಿದೆ. ಇದಕ್ಕೆ ಬೇಕಾದ ಹಾಸಿಗೆ, ಆಕ್ಸಿಜನ್ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ ನೀಡಿದರು. ಆರೋಗ್ಯ ಇಲಾಖೆ ಅಂಕಿ ಅಂಶದನ್ವಯ ಜಿಲ್ಲೆಯಲ್ಲಿ 600 ಜನ ಆಕ್ಸಿಜನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರಲ್ಲಿ ಜಿಲ್ಲಾಸ್ಪತ್ರೆ ಒಂದರಲ್ಲಿಯೇ ಐಎಲ್‌ಐ, ಸಾರಿ 250 ಜನರು, 9 ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಕಳೆದ 10 ದಿನಗಳಲ್ಲಿ 1700 ಸಿಟಿ ಸ್ಕಾನ್‌ನಲ್ಲಿ ಕೋವಿಡ್ ಇರುವುದು ಪತ್ತೆಯಾಗಿದೆ ಎಂದು ಸರ್ವೇಕ್ಷಣಾ ಧಿಕಾರಿ ಡಾ| ರಂಗನಾಥ್ ಮಾಹಿತಿ ನೀಡಿದರು.
ಮುಂಜಾಗ್ರತಾ ಕ್ರಮವಾಗಿ ಏನು ಅಗತ್ಯವೋ ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಿದ ಮಂಜುನಾಥಪ್ರಸಾದ್, ಯಾವುದೇ ಅನುದಾನದ ಕೊರತೆ ಇಲ್ಲ. ಈಗಾಗಲೇ 20 ಕೋಟಿ ರೂ. ಗಳನ್ನು ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲೆಗೆ ಪ್ರಸ್ತುತ 8.5 ಕೆ.ಎಲ್. ಆಕ್ಸಿಜನ್ ಅಗತ್ಯವಿದ್ದು, 8.4 ಕೆ.ಎಲ್ ಪೂರೈಕೆಯಾಗುತ್ತಿದೆ.
ಖಾಸಗಿ ಹಾಗೂ ಸರ್ಕಾರಿ ಸೇರಿ ಒಟ್ಟು 723 ಆಕ್ಸಿಜನ್‌ನೆಟೆಡ್ ಬೆಡ್‌ಗಳಿವೆ. ಮುಂದೆ ಬೇಡಿಕೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಿ ಇನ್ನೂ 2 ಕೆ.ಎಲ್ ಹೆಚ್ಚುವರಿ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಅವರು, ಕಳೆದ ಎರಡು ದಿನಗಳಿಂದ ರೆಮ್‌ಡಿಸಿವರ್ ಪೂರೈಕೆಯಲ್ಲಿ ಸಮಸ್ಯೆಯಾಗಿಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಜಿಲ್ಲಾ ರಕ್ಷಣಾ ಧಿಕಾರಿ ಜಿ. ರಾಧಿ ಕಾ, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.