ಚಿತ್ರದುರ್ಗ: ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ ಎಂದು ಸಮಾಧಾನಪಡುತ್ತಿರುವಾಗಲೇ ಜಿಲ್ಲಾ ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ಬಯಲಾಗಿದೆ. ಜಿಲ್ಲಾಸ್ಪತ್ರೆ ಪಕ್ಕದಲ್ಲೇ ಇರುವ ಜಿಲ್ಲಾ ಕೋವಿಡ್ ಆಸ್ಪತ್ರೆಯ ವಾರ್ಡ್ ನಂ. 13 ರಲ್ಲಿ ಒಂದೇ ಕೊಠಡಿಯಲ್ಲಿ ಮೂರು ಜನ ಮೃತಪಟ್ಟು ಬೆಡ್‌ಗಳ ಮೇಲೆಯೇ ಇರುವುದು, ಸ್ವತ್ಛತೆ ಇಲ್ಲದಿರುವುದು, ರೋಗಿಗಳನ್ನು ಸರಿಯಾಗಿ ಉಪಚರಿಸದಿರುವುದು ಸೇರಿದಂತೆ ಹಲವು ವಿಚಾರಗಳನ್ನು ವಕೀಲರಾದ ಹನುಮಂತರಾಜು ಎಂಬುವವರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಶನಿವಾರ ಹೊರ ಬಂದಿರುವ ವಿಡಿಯೋ ವೈರಲ್ ಆಗಿದ್ದು, ಸೋಂಕಿತರಾಗಿರುವ ವಕೀಲರು ಸೇರಿದಂತೆ ವಾರ್ಡ್‌ನಲ್ಲಿರುವ ರೋಗಿಗಳು ಆತಂಕದಲ್ಲಿ ಮೃತಪಟ್ಟವರ ಪಕ್ಕದಲ್ಲೇ ಕುಳಿತಿರುವುದು, ವೈದ್ಯರು ಸರಿಯಾಗಿ ಸ್ಪಂದಿಸಿ ಚಿಕಿತ್ಸೆ ನೀಡದಿರುವುದು, ಬೆಳಗ್ಗೆ 10 ಗಂಟೆಯಾದರೂ ಉಪಹಾರ ನೀಡದಿರುವುದು ಸೇರಿದಂತೆ ಹಲವು ವಿಚಾರಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ನೋಡಿದಾಕ್ಷಣ ಅಕ್ಷರಶಃ ನರಕಸದೃಶ ಅನ್ನಿಸುತ್ತದೆ. ರಾತ್ರಿ 2 ಗಂಟೆಗೆ ಮೃತಪಟ್ಟಿರುವ ವ್ಯಕ್ತಿಗಳ ಶವವನ್ನು ಬೆಳಗ್ಗೆ 10 ಗಂಟೆಯಾದರೂ ಅಲ್ಲಿಂದ ತೆಗೆಯದೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ನಿರ್ಲಕ್ಷé ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದವರ ಪಕ್ಕದಲ್ಲೇ ಒಂದೇ ವಾರ್ಡ್‌ನಲ್ಲಿ ಮೂರು ಮಂದಿ ಮೃತಪಟ್ಟು ನಾಲ್ಕೈದು ತಾಸು ಅಲ್ಲಿಯೇ ಮೃತದೇಹಗಳಿದ್ದರೆ ಇತರೆ ಸೋಂಕಿತರ ಮನಸ್ಸಿನಲ್ಲಿ ಎಂತಹ ಭಯ ಹುಟ್ಟಬಹುದು, ಅವರು ಚೇತರಿಸಿಕೊಳ್ಳಲು ಸಾಧ್ಯವೆ ಎಂದು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ಸಾಕಷ್ಟು ಹರಿದಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾ ಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಜಿಲ್ಲಾ ಆರೋಗ್ಯಾ ಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ವ್ಯಾಪಕ ಅಸಮಧಾನ ವ್ಯಕ್ತವಾಗಿದೆ. ವಿಡಿಯೋದಲ್ಲಿ ಏನಿದೆ?: ವಕೀಲರಾದ ಹನುಮಂತರಾಜು ಅವರು, ಜಿಲ್ಲಾಸ್ಪತ್ರೆಗೆ ನಾನು ಬಂದು ಎಂಟು ದಿನ ಆಗಿದೆ. ಸರಿಯಾದ ಚಿಕಿತ್ಸೆ ಇಲ್ಲ. ಜಿಲಾಧಿಕಾರಿ, ವೈದ್ಯರು ಯಾರಿಗೆ ಹೇಳಿದರೂ ಸ್ಪಂದಿಸುತ್ತಿಲ್ಲ. ರಾತ್ರಿ ಮೃತಪಟ್ಟ ವ್ಯಕ್ತಿಯ ಮೃತದೇಹ ಇಲ್ಲಿಯೇ ಇದೆ. ಇದೇನಾ ನಿಮ್ಮ ಆಡಳಿತ, ಯಡಿಯೂರಪ್ಪ, ನರೇಂದ್ರ ಮೋದಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಉಸ್ತುವಾರಿ ಸಚಿವ ಶ್ರೀರಾಮುಲು ಇದ್ದೀರಾ ನೀವು. ಈ ರಾಜ್ಯದಲ್ಲಿ ಜೀವಕ್ಕೆ ಬೆಲೆ ಇಲ್ಲವೇ, ನೀವೆಲ್ಲಾ ಸತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಹೀಗೆ ಮುಂದುವರೆದರೆ ಪ್ರತಿಭಟನೆ ಮಾಡುತ್ತೇವೆ. ನಮ್ಮ ಜೀವಕ್ಕೆ ಹೆಚ್ಚು ಕಡಿಮೆ ಆದರೆ ಜಿಲ್ಲಾಡಳಿತವೇ ಹೊಣೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೃದ್ಧೆಯೊಬ್ಬರು ಮಾತನಾಡಿ, ರಾತ್ರಿ 2:30ಕ್ಕೆ ಮƒತಪಟ್ಟ ವ್ಯಕ್ತಿಯ ಮೃತದೇಹದ ಪಕ್ಕದಲ್ಲೇ ಇದ್ದೇವೆ. ಊಟ, ತಿಂಡಿ, ನೀರು, ಗಂಜಿ ಏನೂ ಇಲ್ಲ, ಸ್ವಲ್ಪವೂ ಸ್ವತ್ಛತೆ ಇಲ್ಲ ಎಂದು ದುಃಖ ತೋಡಿಕೊಂಡಿದ್ದಾರೆ.
ಜಿಲ್ಲಾಧಿಕಾರಿ ಭೇಟಿ: ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆ ದರ್ಶನ ಮಾಡಿಸುವ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಜಿಲ್ಲಾ ಕಾರಿ ಕವಿತಾ ಎಸ್. ಮನ್ನಿಕೇರಿ ಭಾನುವಾರ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಡಿಯೋ ಚಿತ್ರಿಕರಣವಾಗಿದ್ದ ಕೋವಿಡ್ ವಾರ್ಡ್ ಸಂಖ್ಯೆ 13ಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿ ಕಾರಿಗಳು, ಅಲ್ಲಿನ ಸೋಂಕಿತರನ್ನು ಮಾತನಾಡಿಸಿ ಸಮಸ್ಯೆ ಆಲಿಸಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ವೃದ್ಧೆಯ ಆರೋಗ್ಯವನ್ನೂ ವಿಚಾರಿಸಿರುವ ಜಿಲ್ಲಾಧಿಕಾರಿಗಳು, ಊಟದ ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವೃದ್ಧೆ ಊಟದ ಸಮಸ್ಯೆ ಇಲ್ಲ, ಸ್ವತ್ಛತೆ ಇಲ್ಲ ಎಂದಿದ್ದಾರೆ. ಸ್ವತ್ಛತೆ ಕಾಪಾಡಿ ಮೃತದೇಹಗಳನ್ನು ಸಕಾಲಕ್ಕೆ ತೆಗೆಯಬೇಕು ಎಂದು ಆಸ್ಪತ್ರೆ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡಿದರು.