ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆಗೆ 7 ಸಾವಿರ ಲೀಟರ್ ಆಕ್ಸಿಜನ್ ಪೂರೈಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗಾಗಿ ಜಿಲ್ಲೆಯ ಆಸ್ಪತ್ರೆಗಳಲ್ಲಿರುವ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಿಕೊಡಲು ತೊಂದರೆ ಇಲ್ಲ. ಸದ್ಯಕ್ಕೆ ದಾವಣಗೆರೆಯಿಂದ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವ್ಯಾಕ್ಸಿನ್ ಸಮಸ್ಯೆ ಇಲ್ಲ. ಆಸ್ಪತ್ರೆಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.
ಹೊಳಲ್ಕೆರೆಯಲ್ಲಿ 50 ಬೆಡ್‌ಗಳ ಕೋವಿಡ್ ಸೆಂಟರ್ ಉದ್ಘಾಟಿಸಲಾಗಿದ್ದು, ಅಲ್ಲಿ 10 ಆಮ್ಲಜನಕ ಸಿಲಿಂಡರ್‌ಗಳಿವೆ. ಶಾಸಕರ ಒತ್ತಡದಿಂದ ಇನ್ನೂ ಹತ್ತು ಜಂಬೋ ಸಿಲಿಂಡರ್ ಒದಗಿಸಲಾಗಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ ಜಿಲ್ಲೆಯಲ್ಲಿ ಮೊಬೈಲ್ ಅಕ್ಸಿಜನ್ ಬೆಡ್ ಸೌಲಭ್ಯ ಕಲ್ಪಿಸಲು ಮೂರು ಬಸ್‌ಗಳನ್ನು ಒದಗಿಸಿದ್ದಾರೆ ಎಂದರು.
ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಕೋವಿಡ್ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಲು ಗ್ರಾಮ ಪಂಚಾಯಿತಿಯವರು ಪ್ರತಿ ಮನೆ ಮುಂದೆ ರಾಸಾಯನಿಕ ಸಿಂಪಡಣೆ ಮಾಡಬೇಕು. ಕೋವಿಡ್ ಕುರಿತು ಜನರಲ್ಲಿ ಅರಿವು ಮೂಡಿಸಿ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಹಳ್ಳಿಗಳಲ್ಲಿ ಕೋವಿಡ್ ಪರೀಕ್ಷೆ ಹೆಚ್ಚು ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಅ ಧಿಕಾರಿಗಳು ಕೋವಿಡ್ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ಎಂ. ಚಂದ್ರಪ್ಪ, ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಪಂ ಸಿಇಒ ಡಾ| ಕೆ. ನಂದಿನಿದೇವಿ, ಎಸ್ಪಿ ರಾಧಿ ಕಾ, ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ಪಾಲಾಕ್ಷ ಮತ್ತಿತರರು ಇದ್ದರು.