ಸಿರಿಗೆರೆ: ಹಲವು ವೈವಿಧ್ಯಮಯ ಶೈಕ್ಷಣಿಕ ಚಟುವಟಿಕೆಗಳಿಂದ ಗಮನ ಸೆಳೆಯುತ್ತಿರುವ ಸಿರಿಗೆರೆ ಸಮೀಪದ ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯಸ್ವಾಮಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಈಗ ಮತ್ತೂಮ್ಮೆ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೆಹಂದಿ ಬಳಸುವ ಮೂಲಕ ತಮ್ಮ ಪಠ್ಯದಲ್ಲಿರುವ ಹಲವು ವಿಜ್ಞಾನದ ಚಿತ್ರಗಳನ್ನು ತಮ್ಮ ಕೈ ಮೇಲೆ ಅರಳಿಸಿಕೊಂಡು ವಿಜ್ಞಾನದ ಕಂಪುನ್ನು ಮೂಡಿಸಿದ್ದಾರೆ.
ಕೋವಿಡ್ ಎರಡನೇ ಅಲೆಯ ತೀವ್ರತೆಯಿಂದ ಶಾಲಾ ಕಾಲೇಜುಗಳು ಬಂದ್ ಆಗಿವೆ. ಆದರೂ ಮುಂದೆ ಬರಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಎದುರಿಸುವ ತವಕ ವಿದ್ಯಾರ್ಥಿಗಳಲ್ಲಿ ಇದ್ದೇ ಇದೆ. ಶಾಲೆಯೂ ಇಲ್ಲ, ಪಾಠವೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಜಡತ್ವ ಬೆಳೆಯಬಾರದು ಎಂಬ ಉದ್ದೇಶದಿಂದ ಕಡ್ಲೆàಗುದ್ದು ಶಾಲೆಯಲ್ಲಿ ಹಲವು ಶೈಕ್ಷಣಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇವುಗಳು ಮುಂದೆ ಬರುವ ಪರೀಕ್ಷೆಗೆ ಸಹಾಯಕವಾಗಲಿ ಎಂಬ ಉದ್ದೇಶದಿಂದ ಈ ಚಟುವಟಿಕೆ ಆರಂಭವಾಗಿದೆ.
ಈ ನಿಟ್ಟಿನಲ್ಲಿ ಮಕ್ಕಳಿಗೆ, ಅದರಲ್ಲೂ ಶಾಲಾ ಹೆಣ್ಣು ಮಕ್ಕಳಿಗೆ ಮೆಹಂದಿ ಎಂದರೆ ತುಂಬಾ ಇಷ್ಟ. ಮೆಹಂದಿಯಲ್ಲಿ ಏಕೆ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿದ ಹಲವು ಚಿತ್ರಗಳನ್ನು ಮೂಡಿಸುವಂತಹ ಕೆಲಸ ಮಾಡಬಾರದು ಎಂಬ ಆಲೋಚನೆ ಬಂದದ್ದೇ ತಡ, ಶಾಲಾ ಶಿಕ್ಷಕರು ಇಂತಹದೊಂದು ಕಾರ್ಯಕ್ಕೆ ಕೈಹಾಕಿದರು. ಮದರಂಗಿ ಬಳಸಿಕೊಂಡು ತಮಗಿಷ್ಟವಾದ ವಿಜ್ಞಾನ ಚಿತ್ರಗಳನ್ನು ತಮ್ಮ ಕೈಗಳ ಮೇಲೆ ಚಿತ್ರರೂಪದಲ್ಲಿ ಬಿಡಿಸಲು ಸೂಚಿಸಲಾಯಿತು. ವಿದ್ಯಾರ್ಥಿನಿಯರು ತುಂಬಾ ಉತ್ಸುಕತೆಯಿಂದ ಮೆಹಂದಿಯಲ್ಲಿ ವಿಜ್ಞಾನ ಚಿತ್ರಗಳನ್ನು ಅರಳಿಸಿದ ಶಾಲಾ ಶಿಕ್ಷಕರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಪೋಷಕರು ತಮ್ಮ ಮಕ್ಕಳ ಕೈಗಳಲ್ಲಿ ವೈವಿಧ್ಯಮಯ ವಿಜ್ಞಾನದ ಚಿತ್ರಗಳನ್ನು ನೋಡಿ ಖುಷಿ ಪಟ್ಟಿದ್ದಾರೆ. ಇದರಿಂದ ವಿನೂತನವಾದ ರೀತಿಯಲ್ಲಿ ಈ ಶಾಲೆಯ ಶಿಕ್ಷಕರು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿದಂತಾಗಿದೆ. “ಮೆಹಂದಿ ಎಂದರೆ ನನಗೆ ತುಂಬಾ ಇಷ್ಟ. ಹಾಗಾಗಿ ಅಂದಚಂದಕ್ಕೆ ಕೈಮೇಲೆ ಮದರಂಗಿಯಿಂದ ಚಿತ್ರ ಬಿಡಿಸಿಕೊಳ್ಳುತ್ತಿದೆ. ನಮ್ಮ ಶಾಲೆಯಲ್ಲಿ ವಿಜ್ಞಾನ ಚಿತ್ರ ಬಿಡಿಸುವ ಕಾರ್ಯಕ್ರಮ ಇರಿಸಿಕೊಂಡಾಗ ಇನ್ನಿಲ್ಲದ ಸಂತೋಷವಾಯಿತು. ಇದನ್ನು ಸದುಪಯೋಗ ಮಾಡಿಕೊಂಡು ನನ್ನ ಎರಡೂ ಕೈಗಳ ಮೇಲೆ ಪಠ್ಯಕ್ರಮದ ಚಿತ್ರಗಳನ್ನು ಬಿಡಿಸಿಕೊಂಡಿದ್ದೇನೆ’ ಎನ್ನುತ್ತಾಳೆ 10ನೇ ತರಗತಿಯ ವಿದ್ಯಾರ್ಥಿನಿ ಸೃಷ್ಟಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ವಿಷಯದಲ್ಲಿ 16 ಅಂಕಗಳನ್ನು ಚಿತ್ರಗಳಿಗೆ ನಿಗದಿಗೊಳಿಸಲಾಗಿದೆ.
ಚಿತ್ರಗಳನ್ನು ಈ ರೀತಿಯಾಗಿ ಮಕ್ಕಳು ಆಸಕ್ತಿಯಿಂದ ಕಲಿತರೆ 16 ಅಂಕಗಳನ್ನು ಸುಲಭವಾಗಿ ಗಳಿಸಬಹುದು. ಹಾಗಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಅವರಿಗಿಷ್ಟವಾದ ವಿಜ್ಞಾನ ಚಿತ್ರಗಳನ್ನು ಮೆಹಂದಿಯಲ್ಲಿ ಬರೆಯಲು ತಿಳಿಸಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ತುಂಬಾ ಸಂತೋಷದಿಂದ ಚಿತ್ರಗಳನ್ನು ಬರೆದಿದ್ದಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕರಾದ ಮಹೇಶ್ ತಿಳಿಸಿದರು.