Advertisement

ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾ ನಿಗದಿ

10:18 PM May 13, 2021 | Team Udayavani

ಚಿತ್ರದುರ್ಗ: ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾವನ್ನು ನಿಗದಿ  ಮಾಡಿದ್ದು, ಇದು ಮೇ 12ರಿಂದಲೇ ಜಾರಿಯಾಗಲಿದೆ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

Advertisement

ಕೆಪಿಎಂಇ ಕಾಯ್ದೆಯನ್ವಯ ಜಿಲ್ಲೆಯಲ್ಲಿ 508 ಸಂಸ್ಥೆಗಳು ನೋಂದಣಿಯಾಗಿದ್ದು, ಇದರಲ್ಲಿ ಸುಸಜ್ಜಿತವಾದ 33 ಆಸ್ಪತ್ರೆ ಗುರುತಿಸಲಾಗಿದೆ. ಸರ್ಕಾರದ ಆದೇಶದನ್ವಯ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಾಗಿದ್ದು, ಇದರಿಂದ 658 ಹಾಸಿಗೆಗಳು ದೊರೆಯಲಿವೆ. ಈಗಾಗಲೇ 6 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಅನುಮತಿ ನೀಡಲಾಗಿದೆ. ಅದರಲ್ಲಿ ಬಸವೇಶ್ವರ ಮೆಡಿಕಲ್‌ ಕಾಲೇಜು ಇಲ್ಲಿ ಶೇ.75ರಷ್ಟು ಹಾಸಿಗೆ, ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ, ಬಸಪ್ಪ ಆಸ್ಪತ್ರೆ, ವಾಯುಪುತ್ರ, ಕೃಷ್ಣ ನರ್ಸಿಂಗ್‌ ಹೋಂ, ಸಾಯಿ ನಾರಾಯಣ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ತಾಲೂಕು ಕೇಂದ್ರಗಳು ಸೇರಿದಂತೆ ಇನ್ನಿತರೆ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್‌ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು.ಹೆರಿಗೆ ಆಸ್ಪತ್ರೆಗಳನ್ನು ಮಾತ್ರ ಮುಂದುವರೆಸಲಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಕೋಟಾದಡಿ ಮೀಸಲಿರುವ ಹಾಸಿಗೆಗಳನ್ನು ರೆಫರಲ್‌ ಆಧಾರದ ಮೇಲೆ ಹಂಚಿಕೆ ಮಾಡಲಿದ್ದು, ಖಾಸಗಿ ಆಸ್ಪತ್ರೆಯವರು ಇವರಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಬೇಕು. ಸರ್ಕಾರಿ ಕೋಟಾದಡಿ ಕೋವಿಡ್‌ ಚಿಕಿತ್ಸೆ ಪಡೆದವರಿಗೆ ಯಾವುದೇ ತಾರತಮ್ಯವಿಲ್ಲದೆ ಎಬಿಆರ್‌ ಕೆ ಯೋಜನೆಯಡಿ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರ ಭರಿಸಲಿದೆ. ಈ ವೆಚ್ಚವನ್ನು ಸಂಬಂಧಿಸಿದ ಆಸ್ಪತ್ರೆಗೆ 21 ದಿನಗಳಲ್ಲಿ ಬಿಲ್ಲಿನ ಮೊತ್ತ ಪಾವತಿ ಮಾಡಲಾಗುತ್ತದೆ. ಆದ್ದರಿಂದ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆಯುವವರಿಂದ ಯಾವುದೇ ಹಣವನ್ನು ವಸೂಲು ಮಾಡುವಂತಿಲ್ಲ, ಇವರಿಗೆ ಬೇಕಾದ ಆಕ್ಸಿಜನ್‌ ಪೂರೈಕೆ ಮಾಡಿಸಿಕೊಟ್ಟು ರೆಮ್‌ ಡೆಸಿವಿಯರ್‌ ಎಬಿಆರ್‌ಕೆ ಯೋಜನೆಯಡಿ ತರಿಸಿಕೊಡಲಾಗುತ್ತದೆ ಎಂದರು.

ಸಿಟಿ ಸ್ಕಾನ್‌ ಪಾಸಿಟಿವ್‌ ಬಂದರೂ ಕೋವಿಡ್‌ ಚಿಕಿತ್ಸೆ: ಆರ್‌ಟಿಪಿಸಿಆರ್‌ನಲ್ಲಿ ಕೋವಿಡ್‌ ನೆಗೆಟಿವ್‌ ಬಂದು ಸಿಟಿ ಸ್ಕಾನ್‌ನಲ್ಲಿ ಪಾಸಿಟಿವ್‌ ಬಂದಲ್ಲಿ ಬಿಪಿಎಲ್‌ ಕಾರ್ಡ್‌ ಇರುವವರಿಗೆ ಶೇ.100ರಷ್ಟು ಉಚಿತ ಹಾಗೂ ಎಪಿಎಲ್‌ ನವರು ಶೇ.70ರಷ್ಟು ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ. ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ನೋಂದಣಿ ಮಾಡಿಕೊಂಡು ಕೋವಿಡ್‌ ಚಿಕಿತ್ಸೆಗೆ ಅನುಮತಿ ನೀಡಿ ಎಬಿಆರ್‌ಕೆ ಯೋಜನೆಯಡಿ ನೋಂದಣಿ ಮಾಡಿ ಸರ್ಕಾರಿ ಕೋಟಾದಡಿ ಇನ್ನಷ್ಟು ಹಾಸಿಗೆಗಳನ್ನು ಮೀಸಲಿರಿಸಿ ಚಿಕಿತ್ಸೆ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.

ಕೋವಿಡ್‌ ಎರಡನೇ ಅಲೆ ತುರ್ತು ಸಂದರ್ಭವಾಗಿದ್ದು, ಈ ವೇಳೆ ಖಾಸಗಿ, ಸರ್ಕಾರಿ ಎಂದು ತಾರತಮ್ಯ ಮಾಡದೇ ಜನರಿಗೆ ಚಿಕಿತ್ಸೆ ನೀಡಿ ಕೋವಿಡ್‌ನಿಂದ ರಕ್ಷಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸಂಪೂರ್ಣ ಸಹಕಾರ ನೀಡಲಿದ್ದು, ಖಾಸಗಿ ಆಸ್ಪತ್ರೆಗಳಿಗೆ ಬೇಕಾದ ಎಲ್ಲ ರಕ್ಷಣೆ, ಔಷಧ, ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Advertisement

ಈಗಾಗಲೇ ಆಕ್ಸಿಜನ್‌ ಪೂರೈಕೆ ಹಾಗೂ ರೆಮ್‌ಡೆಸಿವರ್‌ ಔಷಧ, ಬೆಡ್‌ಗಳ ಹಂಚಿಕೆಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಪ್ರತಿನಿತ್ಯ ಬೆಡ್‌ಗಳ ಪರಿಶೀಲನೆ ನಡೆಸಲಾಗುತ್ತದೆ. ಮತ್ತು ಆಕ್ಸಿಜನ್‌ ಆಡಿಟ್‌ ಅನ್ನು ನಡೆಸುವ ಮೂಲಕ ಎಲ್ಲಿಯೂ ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು. ಎಬಿಆರ್‌ಕೆ ನೋಡಲ್‌ ಅಧಿಕಾರಿ ಡಾ| ಚಂದ್ರಶೇಖರ್‌ ಮಾತನಾಡಿ, ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದಡಿ ಚಿಕಿತ್ಸೆ ಪಡೆಯುವ ಎಲ್ಲರಿಗೂ ಸಂಪೂರ್ಣ ಉಚಿತವಾಗಿರುತ್ತದೆ. ಇದರ ವೆಚ್ಚವನ್ನು ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಭರಿಸಲಾಗುತ್ತದೆ. ಕಳೆದ ವರ್ಷ ಸರ್ಕಾರಿ ಕೋಟಾದಡಿ ಚಿಕಿತ್ಸೆ ನೀಡಿದ ಖಾಸಗಿ ಆಸ್ಪತ್ರೆಗಳಿಗೆ 2.47 ಕೋಟಿಯನ್ನು ಪಾವತಿ ಮಾಡಲಾಗಿದೆ ಎಂದರು.

ಅಪರ ಜಿಲ್ಲಾ ಧಿಕಾರಿ ಇ.ಬಾಲಕೃಷ್ಣ, ಡಿಎಚ್‌ಒ ಡಾ| ಸಿ.ಎಲ್‌. ಪಾಲಾಕ್ಷ, ಜಿಲ್ಲಾ ಸರ್ಜನ್‌ ಡಾ| ಬಸವರಾಜಪ್ಪ, ಜಿಲ್ಲಾ ಸರ್ವೇಕ್ಷಣಾ  ಧಿಕಾರಿ ಡಾ| ರಂಗನಾಥ್‌, ಐಎಂಎ ಅಧ್ಯಕ್ಷ ಡಾ| ಸಾಲಿಮಂಜಪ್ಪ, ಬಸವೇಶ್ವರ ಮೆಡಿಕಲ್‌ ಕಾಲೇಜಿನ ಅಧಿಧೀಕ್ಷಕ ಡಾ| ಪಾಲಾಕ್ಷಪ್ಪ ಹಾಗೂ ವಿವಿಧ ಆಸ್ಪತ್ರೆಗಳ ಮುಖ್ಯಸ್ಥರು, ಅ ಧಿಕಾರಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next