ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹರಡುತ್ತಿದ್ದು ಇದರ ಸರಪಳಿ ತುಂಡರಿಸಲು ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದಲ್ಲಿನ ತಮಟಕಲ್ಲು ರಸ್ತೆಯಲ್ಲಿನ ಬಿಸಿಎಂ ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ತಮಟಕಲ್ಲು ರಸ್ತೆಯಲ್ಲಿರುವ ಬಿಸಿಎಂ ಹಾಸ್ಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡಲಾಗುತ್ತಿದ್ದು, ಇಲ್ಲಿ 250 ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ.
ಇಲ್ಲಿಗೆ ಬರುವವರಿಗೆ ವಸತಿ, ಊಟದ ಜೊತೆಗೆ, ಮಂಚ, ಹಾಸಿಗೆ, ಪ್ಯಾನ್, ಸೊಳ್ಳೆ ಪರದೆ ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಸಿಎಸ್ ಆರ್ ನಿ ಯಡಿ ಜಾನ್ ಮೈನ್ಸ್‌ನ ಪ್ರವೀಣ್ ಚಂದ್ರ ಅವರು ಬೆಡ್ ವ್ಯವಸ್ಥೆ ಮಾಡಿದ್ದು ಕೆಲವೇ ದಿನಗಳಲ್ಲಿ ಇದು ಕಾರ್ಯಾರಂಭ ಮಾಡಲಿದೆ ಎಂದರು.
ಕೋವಿಡ್ ಪಾಸಿಟಿವ್ ಬಂದು ಸಾಮಾನ್ಯ ಲಕ್ಷಣ ಹೊಂದಿರುವವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ಇದೆ. ಇದಕ್ಕಾಗಿ ಪ್ರತ್ಯೇಕ ಶೌಚಾಲಯ, ಬೆಡ್ ರೂಂ ವ್ಯವಸ್ಥೆ ಬೇಕಾಗುತ್ತದೆ. ಈ ವ್ಯವಸ್ಥೆ ಇಲ್ಲದವರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದು ಚಿಕಿತ್ಸೆ ಪಡೆಯಬಹುದಾಗಿದೆ. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದೆ ಮನೆಯಲ್ಲಿದ್ದು ಮನೆಯವರಿಗೆಲ್ಲರಿಗೂ ಕೋವಿಡ್ ಹರಡಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಎಲ್ಲಾ ತಾಲೂಕುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಉಪಯೋಗ ಪಡೆದು ಕೋವಿಡ್‌ನಿಂದ ಗುಣಮುಖರಾಗಿ ತಮ್ಮ ಕುಟುಂಬವನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ, ಜಾನ್ ಮೈನ್ಸ್ ಸಹಾಯಕ ಮಹಾವ್ಯವಸ್ಥಾಪಕ ರಣದಿವೆ, ವ್ಯವಸ್ಥಾಪಕರಾದ ದೀಪಕ್, ಅಜಿತ್, ವಿನಯ್ ಉಪಸ್ಥಿತರಿದ್ದರು.