ಚಿತ್ರದುರ್ಗ: ಕೊರೊನಾ ಎರಡನೇ ಅಲೆ ನಿಯಂತ್ರಣ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಕರ್ಫ್ಯೂ ಘೋಷಣೆ ಮಾಡಿದ್ದು, ಅದರ ಕಟ್ಟುನಿಟ್ಟಿನ ಪಾಲನೆಗಾಗಿ ಇಡೀ ಖಾಕಿ ಪಡೆ ಬೀದಿಗಿಳಿದಿದೆ.
ಅಪ್ಪಿ ತಪ್ಪಿ ವಿನಾ ಕಾರಣ ರಸ್ತೆಗೆ ಬಂದೀರಿ ಜೋಕೆ ಎಂದು ಎಚ್ಚರಿಕೆ ನೀಡುತ್ತಾ, ಕೊರೊನಾ ಕಟ್ಟಿ ಹಾಲು ಈ 14 ದಿನಗಳ ಕಾಲ ಸಹಕಾರ ನೀಡಿ ಎಂಬ ಮನವಿಯನ್ನು ಪೊಲೀಸರು ಬೀದಿಯಲ್ಲಿ ನಿಂತು ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾ ಧಿಕಾ ಅವರು ಸೋಮವಾರ ಖುದ್ದು ರಸ್ತೆಯಲ್ಲಿ ನಿಂತು ಅನಗತ್ಯವಾಗಿ ವಾಹನಗಳಲ್ಲಿ ಬರುತ್ತಿದ್ದವರನ್ನು ತಡೆದು ಎಚ್ಚರಿಕೆ ನೀಡಿದರು.
ಸುಖಾಸುಮ್ಮನೆ ರಸ್ತೆಗೆ ಬಂದಿದ್ದವರ ವಾಹನಗಳನ್ನು ಸ್ಥಳದಲ್ಲಿಯೇ ಸೀಜ್ ಮಾಡಿ ನಡೆದುಕೊಂಡು ಮನೆಗೆ ಹೋಗುವಂತೆ ಮಾಡಿದರು. ಬೊಲೆರೊ ವಾಹನವೊಂದರಲ್ಲಿ ಬಂದಿದ್ದ ವ್ಯಕ್ತಿಯೊಬ್ಬರು ರಾಗಿ ತರಲು ಹೊರಟಿದ್ದೇನೆ ಎಂಬ ಮಾತು ಕೇಳಿದ ಎಸ್ಪಿ, ನಾಚಿಕೆ ಆಗಲ್ವಾ ನಿಮಗೆ, ಜನ ಸಾಯುತ್ತಿದ್ದಾರೆ.
ರಾಗಿ ತರಲು ಬೊಲೆರೋ ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದೀರಿ, ದಿನಸಿ, ತರಕಾರಿಗೆ ನಡೆದುಕೊಂಡು ಹೋಗಬೇಕು ಎಂಬ ಸರ್ಕಾರದ ಮಾರ್ಗಸೂಚಿ ಗೊತ್ತಿಲ್ಲವೇ ಎಂದು ಪ್ರಶ್ನಿಸಿ ವಾಪಸ್ ಕಳುಹಿಸಿದರು. ಗಾಂಧಿ ವೃತ್ತದಲ್ಲಿ ಮೊಕ್ಕಾಂ ಹೂಡಿದ್ದ ಪೊಲೀಸರು ವೈದ್ಯರು, ವಕೀಲರು, ಬ್ಯಾಂಕ್ ನೌಕರರು, ಖಾಸಗಿ ಉದ್ಯೋಗಸ್ಥರು, ರೈತರು, ಆರೋಗ್ಯ ಸೇವೆ, ಮೆಡಿಕಲ್ ಸ್ಟೋರ್ ಹೀಗೆ ಹತ್ತು ಹಲವಾರು ರೀತಿಯ ಕೆಲಸಗಳಿಗೆ ಹೋಗುವವರನ್ನು ತಡೆದು ವಿಚಾರಣೆ ನಡೆಸಿದರು.
ಗುರುತಿನ ಚೀಟಿಗಳನ್ನು ಪರಿಶೀಲಿಸಿ ತುರ್ತು ಅವಶ್ಯಕತೆ ಇದ್ದವರನ್ನು ಕಳಿಸಿ, ಉಳಿದವರ ವಾಹನಗಳನ್ನು ಸೀಜ್ ಮಾಡಿದರು. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಜಿ. ರಾ ಧಿಕಾ, ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಎಲ್ಲಾ ಕಡೆ ಚೆಕ್‌ಪೋಸ್ ಗಳನ್ನು ಹಾಕಿದ್ದು, ನಮ್ಮ ಊರಿನಿಂದ ಹೊರಗೆ ಹೋಗುವ ಹಾಗೂ ಹೊರ ಊರಿನಿಂದ ಬರುವ ವಾಹನಗಳನ್ನು ತಡೆದು ತಪಾಸಣೆ ಮಾಡಲಾಗುತ್ತಿದೆ. ಹೆಂಡತಿ ಮಕ್ಕಳೊಂದಿಗೆ ಬೈಕ್‌ನಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡಲು ಅವಕಾಶವಿಲ್ಲ. ಅಂತಹವರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುವುದು ಎಂದರು. ಈ ವೇಳೆ ಸಿಪಿಐಗಳಾದ ನಯೀಂ ಅಹಮ್ಮದ್, ಬಾಲಚಂದ್ರ ನಾಯಕ್, ಪ್ರಕಾಶ್ ಸೇರಿದಂತೆ ವಿವಿಧ ಠಾಣೆಗಳ ಎಸ್‌ಐ, ಡಿಎಆರ್ ಸಿಬ್ಬಂದಿ ಹಾಜರಿದ್ದರು.
ಕೋಟೆಗೆ ಹೋಗುವ ರಸ್ತೆ, ಮೆದೇಹಳ್ಳಿ ರಸ್ತೆ, ಧರ್ಮಶಾಲಾ ರಸ್ತೆ, ಎಸ್ .ಬಿ.ಎಂ.ಬ್ಯಾಂಕ್ ಪಕ್ಕದ ರಸ್ತೆಯನ್ನು ಬ್ಯಾರಿಕೇಡ್ ಮತ್ತು ಗೂಟಗಳಿಂದ ಬಂದ್ ಮಾಡಲಾಗಿದೆ. ಉಳಿದಂತೆ ಹೊಳಲ್ಕೆರೆ ರಸ್ತೆ, ಮೆದೇಹಳ್ಳಿ ರಸ್ತೆ, ರಾಷ್ಟ್ರೀಯ ಹೆದ್ದಾರಿ-13, ಚಳ್ಳಕೆರೆ ಟೋಲ್‌ಗೇಟ್‌ನಲ್ಲಿ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ವಾಹನ ಹಾಗೂ ಅನಗತ್ಯವಾಗಿ ತಿರುಗಾಡುತ್ತಿರುವವರನ್ನು ತಡೆದು ವಿಚಾರಣೆ ನಡೆಸಲಾಗುತ್ತಿದೆ.