ಭರಮಸಾಗರ: ಮನೆಯೊಂದರಲ್ಲಿ ಅವಿತುಕುತ್ತಿದ್ದ ಚಿರತೆಯನ್ನು ಗೃಹಣಿಯೊಬ್ಬಳ ಸಮಯ ಪ್ರಜ್ಞೆಯಿಂದ ಅರಣ್ಯ ಇಲಾಖೆಯವರು ಸೆರೆ ಹಿಡಿಯವಲ್ಲಿ ಸಫಲವಾದ ಘಟನೆ ಸಮೀಪದ ಮುದ್ದಾಪುರ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ಜರುಗಿದೆ.
ಮುದ್ದಾಪುರ ಗ್ರಾಮದ ಚಿದಾನಂದ ಎಂಬುವವರ ಪತ್ನಿ ನೇತ್ರಾ ಮನೆ ಮುಂದಿನ ಕಸಗೂಡಿಸಿ ರಂಗೋಲಿ ಹಾಕುತ್ತಿದ್ದಾಗ ಮನೆಯೊಳಗೆ ಸದ್ದು ಉಂಟಾಗಿದ್ದನ್ನು ಗಮನಿಸಿ ಅಡುಗೆ ಮನೆ ಒಳ ಹೋಗಿ ನೋಡಿದಾಗ ಚಿರತೆ ಸೆಲ್ಪ್ ಗೋಡೆ ಮೇಲೆ ಅವಿತುಕೊಂಡಿರುವುದನ್ನು ಗಮನಿಸಿದ್ದಾರೆ. ತಕ್ಷಣ ಹೊರಹೋಗಿ ಬಾಗಿಲು ಮುಂದೆ ಮಾಡಿದ್ದಾರೆ.
ಮನೆಯ ಹಾಲ್‌ನಲ್ಲಿ ಮಲಗಿದ್ದ ಪತಿ ಚಿದಾನಂದ ಅವರನ್ನು ನೆರೆಯವರ ಸಹಾಯದಿಂದ ಚಿರತೆಯ ಚಲನವಲನ ಗಮನಿಸಿ ಮನೆಯಿಂಧ ಹೊರ ಕರೆತಂದಿದ್ದಾರೆ. ಮನೆಯ ಎರಡು ಬದಿಯ ಬಾಗಿಲುಗಳನ್ನು ಲಾಕ್ ಮಾಡಿ ದ್ದಾರೆ ಬಳಿಕ ಅರಣ್ಯ ಮತ್ತು ಪೊಲೀಸ್ ಇಲಾಖೆಗೆ ಹಳ್ಳಿಗರು ಸುದ್ದಿ ತಿಳಿಸಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಕಟ್ಟೆಚ್ಚರ ವಹಿಸಿ ಬೋನು ಮತ್ತು ಬಲೆ ಬಳಸಿ ಅವಿತುಕುತ್ತಿದ್ದ ಚಿರತೆ ಸೆರೆ ಹಿಡಿಯುವಲ್ಲಿ ಸಫಲರಾದರು. ಆಡುಮಲ್ಲೇಶ್ವರ ಅರಣ್ಯ ಧಾಮಕ್ಕೆ ಬಿಟ್ಟಿದ್ದಾರೆ. ಚಿರತೆ ಮನೆಗೆ ನುಗ್ಗಿದ ಸುದ್ದಿ ಸುತ್ತಲಿನ ಹಳ್ಳಿಗಳಿಗೆ ಕಾಡ್ಗಿಚ್ಚಿನಂತೆ ಹರಡಿ ಸಾವಿರಾರು ಜನರು ಚಿದಾನಂದ ಅವರ ಮನೆ ಮುಂದೆ ಜಮಾಯಿಸಿದ್ದರು.
ಚಿತ್ರದುರ್ಗ ವಲಯ ಅರಣ್ಯಾ ಧಿಕಾರಿ ಜಿ.ಎಸ್. ಸಂದೀಪ್ ನಾಯಕ್, ಎನ್.ವಾಸುದೇವ್, ಅರಣ್ಯಾ ಧಿಕಾರಿ ಟಿ.ಬಿ. ರುದ್ರಮುನಿ, ಪಿಎಸ್‌ಐ ಶಿವಕುಮಾರ್, ಸಿಬ್ಬಂದಿ ನವೀನ್ ಪಿ.ಹಿರೇಗೌಡರ್, ಎ.ಎಚ್. ಅಂಜಿನಪ್ಪ, ಎನ್.ಗುರುಮೂ ರ್ತಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.