Advertisement

ಜಿಲ್ಲೆಯಲ್ಲಿ ಕೊರೊನಾ ಗೆದ್ದವರೇ ಹೆಚ್ಚು

10:12 PM May 10, 2021 | Team Udayavani |

„ತಿಪ್ಪೇಸ್ವಾಮಿ ನಾಕೀಕೆರೆ

Advertisement

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿ ಗುಣಮುಖರಾಗುವವರ ಸರಾಸರಿ ಪ್ರಮಾಣ ಶೇ.90.22 ಕ್ಕೆ ತಲುಪಿದೆ. ಎಲ್ಲೆಲ್ಲೂ ಕೋವಿಡ್‌ 19 ಎರಡನೇ ಅಲೆ ಅಪಾಯದ ಸುದ್ದಿಗಳೇ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಗುಣಮುಖರಾಗುವವರ ಸಂಖ್ಯೆ ಶೇ.90ರಷ್ಟಿರುವುದು ಜನರಲ್ಲಿ ಭರವಸೆ ಮೂಡಿಸಿದೆ. ಇನ್ನೂ ಸೋಂಕಿಗೆ ತುತ್ತಾಗುವವರ ಸರಾಸರಿ (ಪಾಸಿಟಿವಿಟಿ ರೇಟ್‌) ಶೇ.5ರಷ್ಟಿದ್ದರೆ, ಸಾವಿನ ಸರಾಸರಿ ಶೇ.1ರಷ್ಟಿದೆ. ಏಕಾಏಕಿ ಆರಂಭವಾದ ಎರಡನೇ ಅಲೆ ಬಹಳ ಅಪಾಯಕಾರಿ ಎನ್ನುವುದು ಹಂತಹಂತವಾಗಿ ಮನವರಿಕೆಯಾಗುತ್ತಿದೆ.

ಇದು ಗೊತ್ತಾಗುತ್ತಲೇ ಸಾರ್ವಜನಿಕರು ಕೂಡಾ ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದರೊಟ್ಟಿಗೆ ಸರ್ಕಾರ ಹಾಗೂ ಆಸ್ಪತ್ರೆಗಳು, ವೈದ್ಯಾ  ಧಿಕಾರಿಗಳು ಕೂಡಾ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿವೆ.

21 ಆಸ್ಪತ್ರೆ, 1267 ಬೆಡ್‌ ಕೋವಿಡ್‌ಗೆ ಮೀಸಲು: ಕೋವಿಡ್‌ ಆಪತ್ತು ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಕಳೆದ ವರ್ಷ ಬಂದ ಕೊರೊನಾ ಮೊದಲ ಅಲೆ ಎದುರಿದ ಅನುಭವವನ್ನು ಆಧಾರವಾಗಿಟ್ಟುಕೊಂಡು, ಈ ವರ್ಷ ಮತ್ತಷ್ಟು ಗುಣಮಟ್ಟದ ಸೇವೆ ಹಾಗೂ ರೋಗಿಗಳ ಜೀವ ಉಳಿಸಲು ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಸದ್ಯ ಜಿಲ್ಲೆಯಲ್ಲಿ 16 ಸರ್ಕಾರಿ ಆಸ್ಪತ್ರೆಗಳು, 5 ಖಾಸಗಿ ಆಸ್ಪತ್ರೆಗಳಲ್ಲಿ 1267 ಬೆಡ್‌ಗಳನ್ನು ಕೋವಿಡ್‌ ರೋಗಿಗಳಿಗೆ ಮೀಸಲಿಡಲಾಗಿದೆ. ಕೆಪಿಎಂಇ ಅಡಿ ನೊಂದಣಿ ಮಾಡಿಸಿಕೊಂಡು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡೆಸಿವಿರ್‌ ಇಂಜಕ್ಷನ್‌ ನೀಡಲಾಗುತ್ತಿದೆ.

ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಪ್ರತಿ ದಿನ 250 ರೆಮ್‌ಡೆಸಿವಿರ್‌ ಬರುತ್ತಿದ್ದು, ಇದರಲ್ಲೇ ಸಾರ್ವಜನಿಕ ಆಸ್ಪತ್ರೆಗಳಿಗೂ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 45 ಖಾಸಗಿ ಆಸ್ಪತ್ರೆಗಳಿದ್ದರೂ, ಬೆಡ್‌ ಗಳ ಸಂಖ್ಯೆ 50ಕ್ಕಿಂತ ಕಡಿಮೆ ಇರುವವರೇ ಹೆಚ್ಚು. 50ಕ್ಕಿಂತ ಹೆಚ್ಚು ಬೆಡ್‌ಗಳ ಆಸ್ಪತ್ರೆಯಾದರೆ ಅದರಲ್ಲಿ ಶೇ.50ರಷ್ಟು ಬೆಡ್‌ ಬಿಡಿಸಿಕೊಳ್ಳಬಹುದು. ಕಡಿಮೆ ಇರುವುದರಿಂದ ಇರುವ ವ್ಯವಸ್ಥೆಯಲ್ಲೇ ನಿರ್ವಹಣೆ ಮಾಡಲಾಗುತ್ತಿದೆ.

Advertisement

ಆಕ್ಸಿಜನ್‌ ಬೆಡ್‌ಗಳದ್ದೇ ಕೊರತೆ: ಸದ್ಯ ಸಮಸ್ಯೆ ಇರುವುದು ಆಕ್ಸಿಜನ್‌ ಹಾಗೂ ಆಕ್ಸಿಜನ್‌ಯುಕ್ತ ಬೆಡ್‌ ಗಳದ್ದು. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕೋವಿಡ್‌ ಆಸ್ಪತ್ರೆಯಲ್ಲಿ 175 ಆಕ್ಸಿನೇಟೆಡ್‌ ಬೆಡ್‌ಗಳಿವೆ. ಸದ್ಯ ಎಲ್ಲವೂ ಭರ್ತಿಯಾಗಿವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 50 ಬೆಡ್‌ಗಳಿವೆ. ಇದರೊಟ್ಟಿಗೆ 11 ಸಮುದಾಯ ಆರೋಗ್ಯ ಕೇಂದ್ರಗಳನ್ನು 11 ಸಮುದಾಯ ಆರೋಗ್ಯ ಕೇಂದ್ರಗಳನ್ನೂ ಕೋವಿಡ್‌ ಕೇರ್‌ ಸೆಂಟರ್‌ ಆಗಿ ಪರಿವರ್ತಿಸಿ ಅಲ್ಲಿಗೂ ರೋಗಿಗಳನ್ನು ಕಳಿಸಲಾಗುತ್ತಿದೆ. ಹೋಂ ಐಸೋಲೇಶನ್‌ ಬ್ಯಾನ್‌ಗೆ ಚಿಂತನೆ: ಜಿಲ್ಲೆಯಲ್ಲಿ ಒಟ್ಟು 1644 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ 737 ಸೋಂಕಿತರು ಹೋಂ ಐಸೋಲೇಶನ್‌ ನಲ್ಲಿದ್ದಾರೆ. ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿರುವವರು ಶಿಸ್ತಿನಿಂದ ಮನೆಯಲ್ಲೇ ಇರದೆ ಹೊರಗೆ ಓಡಾಡುವುದು ಮಾಡುತ್ತಿದ್ದಾರೆ. ಇದರಿಂದ ಸೋಂಕು ಹರಡುತ್ತಿದೆ ಎಂದು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ್ದ ಸಭೆಯಲ್ಲಿ ಚರ್ಚೆಯಾಗಿತ್ತು. ಅದೇ ಸಭೆಯಲ್ಲಿ ಸಚಿವ ಶ್ರೀರಾಮುಲು ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ರದ್ದು ಮಾಡಿ, ಎಲ್ಲರಿಗೂ ಹಾಸ್ಟೆಲ್‌ಗ‌ಳಲ್ಲಿ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ 22 ಹಾಸ್ಟೆಲ್‌ಗ‌ಳಲ್ಲಿ ಕೋವಿಡ್‌ ಸೋಂಕಿತರನ್ನು ಇಟ್ಟು ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ.

ಮನೆಯಲ್ಲಿ ಸಂಪೂರ್ಣ ವ್ಯವಸ್ಥೆ ಇಲ್ಲದವರಿಗೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ದಾಖಲಾಗುವಂತೆ ಸೂಚನೆ ನೀಡಲಾಗಿದೆ. ಹೋಂ ಐಸೋಲೇಶನ್‌ ಬ್ಯಾನ್‌ ಮಾಡುವ ಸಿದ್ಧತೆಯೂ ನಡೆಯುತ್ತಿದೆ. ಈಗಾಗಲೇ ಆರೋಗ್ಯ ಇಲಾಖೆ ಹೋಂ ಐಸೋಲೇಶನ್‌ನಲ್ಲಿ ಇರುವವರು ಕೋವಿಡ್‌ ಕೇರ್‌ ಸೆಂಟರ್‌ಗೆ ಬರುವಂತೆ ನೀಡಿದ ಸೂಚನೆಗೆ ಕೇವಲ 3 ಜನ ಮಾತ್ರ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next