ಹೊಳಲ್ಕೆರೆ: ಕೋವಿಡ್ ವೈರಸ್ ಸೋಂಕು ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಶ್ರಮಿಸಬೇಕು ಎಂದು ಪುರಸಭೆ ಅಧ್ಯಕ್ಷ ಆರ್.ಎ. ಅಶೋಕ್ ಸೂಚಿಸಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಿದ್ಧತೆ ಹಾಗೂ ಆಸ್ಪತ್ರೆಯಲ್ಲಿರುವ ಕುಂದು ಕೊರತೆ ಪರಿಶೀಲಿಸಿ ಅವರು ಮಾತನಾಡಿದರು. ರಾಜ್ಯದ ಕೋವಿಡ್ ಸನ್ನಿವೇಶದಿಂದ ಜನರು ಭಯಭೀತರಾಗಿದ್ದಾರೆ. ತಾಲೂಕಿನ ಜನರನ್ನು ಕೋವಿಡ್ ಸೋಂಕಿನಿಂದ ರಕ್ಷಣೆ ಮಾಡಲು ಆರೋಗ್ಯ ಪೂರಕ ಸೇವೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪುರಸಭೆಯಿಂದ ಅಗತ್ಯ ನೆರವು ನೀಡುವುದಾಗಿ ಭರವಸೆ ಭರವಸೆ ನೀಡಿದರು.
ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್ ಮಾತನಾಡಿ, ಆಡಳಿತಾಧಿ ಕಾರಿಗಳು ಆಸ್ಪತ್ರೆಯಲ್ಲಿ ಗುಣಮಟ್ಟದ ಸೇವೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಸಹಕಾರ ನೀಡಲಿದ್ದೇವೆ. ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಸಾರ್ವಜನಿಕರಿಗೆ ತೊಂದೆಯಾಗುತ್ತಿದೆ. ವಿದ್ಯುತ್,ಕುಡಿಯುವ ನೀರು, ಸ್ವತ್ಛತೆಗೆ ಆದ್ಯತೆ ನೀಡಬೇಕೆಂದರು. ಮಾಜಿ ಅಧ್ಯಕ್ಷ ಬಿ.ಎಸ್. ರುದ್ರಪ್ಪ ಮಾತನಾಡಿ, ಆಸ್ಪತ್ರೆಯಲ್ಲಿ ಸರಿಯಾದ ಸೌಲಭ್ಯಗಳಿಲ್ಲದೆ ರೋಗಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಇರುವ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುತ್ತಿಲ್ಲ. ಬೇಕಾಬಿಟ್ಟಿಯಾಗಿ ಕೆಲಸ ಮಾಡಿದರೆ ಆರೋಗ್ಯ ಸೇವೆ ಜನರಿಗೆ ಸಿಗುವುದಿಲ್ಲ. ಕೋವಿಡ್ ನಿಯಂತ್ರಿಸಲು ಎಲ್ಲರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ತಿಳಿಸಿದರು. ಸದಸ್ಯ ಸೈಯದ್ ಸಜೀಲ್ ಮಾತನಾಡಿ, ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಮೇಲೆ ವೈದ್ಯಾಧಿಕಾರಿಗಳಿಗೆ ಹಿಡಿತವಿಲ್ಲ. ಸರ್ಕಾರ ಸೌಲಭ್ಯ ಕಲ್ಪಿಸಿದ್ದರೂ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡತ್ತಿಲ್ಲ. ಸಾಕಷ್ಟು ಸಮಸ್ಯೆಗಳಿದ್ದರೂ ವೈದ್ಯಾಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ.
ಇದರಿಂದ ಸಮಸ್ಯೆಗಳು ಹೆಚ್ಚಾಗಿ ಜನರಿಗೆ ಸರ್ಕಾರಿ ಸೌಲಭ್ಯ ಮರಿಚಿಕೆ ಎನ್ನುವಂತಾಗಿದೆ ಎಂದು ಆರೋಪಿಸಿದರು. ವಿಜಯಸಿಂಹ ಖಟ್ರೋತ್ ಮಾತನಾಡಿ, ವೈದ್ಯರು ಅಸ್ಪತ್ರೆಯ ಹೃದಯ ಎನ್ನಲಾಗುವ ತುರ್ತು ಚಿಕಿತ್ಸಾ ಘಟಕಕ್ಕೆ ಬೇಕಾದ ಸೌಲಭ್ಯ ಕಲ್ಪಿಸಿಲ್ಲ. ಶುಚಿತ್ವ, ಔಷಧ, ಸಿಬ್ಬಂದಿ, ವಿದ್ಯುತ್, ಆಂಬ್ಯುಲೆನ್ಸ್ ಸೌಲಭ್ಯ ಜನರಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದಸ್ಯರಾದ ಮಲ್ಲಿಕಾರ್ಜುನ್, ಸೈಯದ್ ಮನ್ಸೂರು ಮಾತನಾಡಿದರು. ವೈದ್ಯಾಧಿಕಾರಿ ಡಾ| ಕೃಷ್ಣಮೂರ್ತಿ, ತಾಲೂಕು ಆರೋಗ್ಯಾ ಧಿಕಾರಿ ಡಾ| ಜಯಸಿಂಹ, ಸದಸ್ಯರಾದ ಪಿ.ಆರ್. ಮಲ್ಲಿಕಾರ್ಜುನಸ್ವಾಮಿ, ವಕೀಲ ಎಸ್. ವೇದಮೂರ್ತಿ, ಸಂತೋಷಕುಮಾರ್ ಮತ್ತಿತರರು ಇದ್ದರು.