ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಉದ್ದೇಶದಿಂದ ಆರೋಗ್ಯ ಸೌಲಭ್ಯಗಳ ವೃದ್ಧಿಗಾಗಿ 20 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಕುರಿತ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹಾಗೂ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುನಾಥಪ್ರಸಾದ್ ಈ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದರು.
ಅದರಂತೆ ಜಿಲ್ಲಾ ಧಿಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದು, 20 ಕೋಟಿ ರೂ. ಅನುದಾನದಲ್ಲಿ ಏನೆಲ್ಲಾ ಮಾಡಬಹುದು ಎನ್ನುವುದನ್ನು ವಿವರಿಸಿದ್ದಾರೆ.
ಆಕ್ಸಿಜನ್ ಸ್ಟಾಕ್ ಯೂನಿಟ್ ಅವಶ್ಯ: ಸದ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿ 6 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಇದೆ. ಇದು ಸಾಕಾಗುತ್ತಿಲ್ಲ. ಇದರೊಟ್ಟಿಗೆ ಮತ್ತೂಂದು 3 ಸಾವಿರ ಲೀಟರ್ ಸಾಮರ್ಥ್ಯದ ಘಟಕ ಸ್ಥಾಪಿಸುವುದು ಜಿಲ್ಲಾ ಧಿಕಾರಿಗಳ ಉದ್ದೇಶವಾಗಿದೆ. ಇದರೊಟ್ಟಿಗೆ ಜಿಲ್ಲೆಯಲ್ಲೇ ಆಮ್ಲಜನಕ ಉತ್ಪಾಧನಾ ಘಟಕ ಸ್ಥಾಪನೆಯ ಅಗತ್ಯವೂ ಇದೆ. ಆದರೆ, ಇದು ಕಾರ್ಯಾರಂಭ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಸದ್ಯಕ್ಕೆ ಆಕ್ಸಿಜನ್ ಸ್ಟಾಕ್ ಯೂನಿಟ್ ಮಂಜೂರಾದರೆ ಪರಿಸ್ಥಿತಿ ನಿಭಾಯಿಸಬಹುದು ಎನ್ನುವ ಬಗ್ಗೆ ಪತ್ರದಲ್ಲಿ ಉಲ್ಲೇಖವಿದೆ. ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯ ಸಮಸ್ಯೆ ತಲೆದೋರಿದೆ.
ಇದನ್ನು ನೀಗಿಸಲು ಹೆಚ್ಚುವರಿಯಾಗಿ 200 ಆಕ್ಸಿನೇಟೆಡ್ ಬೆಡ್ ಹಾಗೂ 20 ಹೈ ಫ್ಲೆಯಿಂಗ್ ನಾಜಲ್ ಆಕ್ಸಿಜನ್ ಯೂನಿಟ್ ಯಂತ್ರಗಳ ಸಹಿತ ಹಲವು ಸೌಕರ್ಯಗಳ ಸೃಜನೆ ಮಾಡಬೇಕಿದೆ ಎಂದು ಜಿಲ್ಲಾ ಕಾರಿಗಳು ತಿಳಿಸಿದ್ದಾರೆ.
ಲ್ಯಾಬ್ ಸಂಖ್ಯೆ ಹೆಚ್ಚಾಗಬೇಕು: ಈ ಹಿಂದೆ ಸಂಸದ ಎ. ನಾರಾಯಣಸ್ವಾಮಿ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಕೋವಿಡ್ ಪರೀಕ್ಷೆ ಲ್ಯಾಬ್‌ಗಳನ್ನು ಸ್ಥಾಪಿಸಿ ಪರೀಕ್ಷೆ ಮಾಡುವ ಸಂಖ್ಯೆ ಹೆಚ್ಚಿಸಿ. ತ್ವರಿತವಾಗಿ ಟೆಸ್ಟ್ ಮಾಡಿದ ವರದಿ ನೀಡಿ. ಇದರಿಂದ ಕೊರೊನಾ ಹರಡುವ ಪ್ರಮಾಣ ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದರು. ಸರ್ಕಾರದ ಸಾಕಷ್ಟು ಅನುದಾನವಿದೆ. ಅದನ್ನು ಬಳಸಿಕೊಂಡು ಲ್ಯಾಬ್ ಮಾಡಿ ಎಂದು ಸಭೆಯಲ್ಲಿ ಸೂಚಿಸಿದ್ದರು.
ಅದರಂತೆ ಜಿಲ್ಲಾ ಧಿಕಾರಿಗಳು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಆರ್‌ಟಿಪಿಸಿಆರ್ ಲ್ಯಾಬ್ ಟೆಸ್ಟ್ ಸಂಖ್ಯೆ ನಿತ್ಯ 2 ಸಾವಿರ ದಾಟುತ್ತಿದೆ. ಈ ಸಂಖ್ಯೆ ಹೆಚ್ಚಿಸಲು ಜಿಲ್ಲಾ ಕೇಂದ್ರದಲ್ಲಿ ಮತ್ತೂಂದು ಲ್ಯಾಬ್ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.