ಚಿತ್ರದುರ್ಗ: ಕೋವಿಡ್ ಮುಕ್ತ ಭಾರತ, ಜೀವಜಲ ಸಂರಕ್ಷಣೆ, ಪ್ರಾಮಾಣಿಕ ಭಾರತ, ರಾಮಭಕ್ತಿ ಯುವಶಕ್ತಿ, ಎಲ್ಲರಿಗೂ ಉತ್ತಮ ಆಹಾರ ದೊರೆಯಬೇಕು ಎಂದು ಐದು ಸಂಕಲ್ಪಗಳನ್ನು ಹೊತ್ತು ಹನುಮ ಜನ್ಮಭೂಮಿಯಿಂದ ರಾಮಜನ್ಮ ಭೂಮಿಗೆ ಹೊರಟಿದ್ದ ಸೈಕಲ್ ಯಾತ್ರೆ ಯಶಸ್ವಿಯಾಗಿದೆ. ಹಿರಿಯೂರು ತಾಲೂಕು ಹೊಸಯಳನಾಡು ಗ್ರಾಮದ ಕರಿಯಣ್ಣ ಎಂಬ ಯುವಕ ಈ ಸಾಧನೆ ಮಾಡಿದ್ದಾರೆ.
ಇವರ ಜತೆಗೆ ಹಾವೇರಿ ಜಿಲ್ಲೆಯ ವಿವೇಕ್ ಇಂಗಳಗಿ, ಹೈದರಾಬಾದ್‌ನ ಎಂ. ವರಪ್ರಸಾದ್ ಮಾರ್ಗ ಮಧ್ಯೆ ಜತೆಯಾಗಿದ್ದರು. ಮೂರು ಜನ ಸೇರಿ 18 ದಿನದಲ್ಲಿ 2000 ಕಿಮೀ ಹಾದಿ ಕ್ರಮಿಸಿ ಏ. 30 ರಂದು ಅಯೋಧ್ಯೆ ತಲುಪಿದ್ದಾರೆ. ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಯ.ಬ.ದ.ಕ (ಯಳನಾಡು ಬಡಗಿ ದಾಸಪ್ಪನ ಮಗ ಕರಿಯಣ್ಣ) ಎಂಬ ಹೆಸರಿನೊಂದಿಗೆ ಪೇಜ್ ರಚಿಸಿರುವ ಕರಿಯಣ್ಣ, ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ರಚಿಸಿಕೊಂಡು ಸೇವಾ ಕಾರ್ಯ ಮಾಡುತ್ತಿದ್ದರು.
ಏ. 12 ರಂದು ಸ್ವಗ್ರಾಮ ಯಳನಾಡಿನಿಂದ ಸೈಕಲ್ ಯಾತ್ರೆ ಆರಂಭಿಸಿದ ಇವರು ಹಿರಿಯೂರಿನಿಂದ ಹಂಪಿ, ಅಂಜನಾದ್ರಿ ತಲುಪಿ ಅಲ್ಲಿ ಹನುಮನ ಆಶೀರ್ವಾದ ಪಡೆದುರು. ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶದ ಮೂಲಕ ಅಯೋಧ್ಯೆ ತಲುಪಿದ್ದಾರೆ. ಹಾವೇರಿ ಜಿಲ್ಲೆ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಇಂಗಳಗಿ ಕರಿಯಣ್ಣ ಅವರ ಯಾತ್ರೆ ವಿಚಾರ ತಿಳಿದು ಹಾವೇರಿಯಿಂದ ಅಂಜನಾದ್ರಿ ತಲುಪಿ ಜತೆಯಾಗಿದ್ದಾರೆ. ಅಲ್ಲಿಂದ ಹೊರಟ ಇಬ್ಬರ ಸೈಕಲ್ ಸವಾರಿ ಹೈದರಾಬಾದ್(ಭಾಗ್ಯನಗರ) ತಲುಪುತ್ತಲೇ ಅಲ್ಲಿ ರಾಷ್ಟ್ರೀಯ ಸೈಕಲ್ ಕ್ರೀಡಾಪಟು ಎಂ. ವರಪ್ರಸಾದ್ ಇವರಿಬ್ಬರ ಜೊತೆಗೂಡಿದರು.
ಒಟ್ಟು ಮೂರು ಜನ ಸೈಕಲ್ ಯಾತ್ರೆ ಮಾಡಿ ಅಯೋಧ್ಯೆ ತಲುಪಿ ಅಲ್ಲಿರುವ ಬಾಲರಾಮನ ದರ್ಶನ ಪಡೆದರು. ತಾವು ಹೊತ್ತು ತಂದ ಸಂಕಲ್ಪಗಳು ಈಡೇರಲಿ. ಭಾರತ ಆದಷ್ಟು ಬೇಗ ಕೊರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಿದ್ದಾರೆ. ಹಾದಿಯುದ್ದಕ್ಕೂ ಸ್ಪಂದಿಸಿದ ಜನತೆ: ಪ್ರತಿ ದಿನ ಎಷ್ಟು ಕಿಮೀ ಸೈಕಲ್ ಯಾತ್ರೆ ಮಾಡಬೇಕು, ಎಲ್ಲಿ ತಂಗಬೇಕು, ಊಟ, ಉಪಹಾರ ಯಾವುದನ್ನೂ ಪೂರ್ವ ನಿಯೋಜನೆ ಮಾಡಿಕೊಳ್ಳದೆ ಹೊರಟಿದ್ದ ಈ ತಂಡಕ್ಕೆ ದಾರಿಯುದ್ದಕ್ಕೂ ಜನ ಸ್ಪಂದಿಸಿದ ರೀತಿಗೆ ಬೆರಗಾಗಿದ್ದಾರೆ. ಹಂಪಿಯಲ್ಲಿ ಎಳನೀರು ಮಾರುವ ವ್ಯಾಪಾರಿಯೊಬ್ಬರು ಎಳನೀರು ಕೊಟ್ಟು ಸತ್ಕರಿಸಿ, ಕರಿಯಣ್ಣನ ಸೈಕಲ್ ಹೊತ್ತು ನದಿ ದಾಟಿಸಿದ್ದು ಸಾತ್ ಶ್ರೀರಾಮಚಂದ್ರನೇ ಹಾದಿ ತೋರಿದಂತಾಯಿತು ಎಂದು ಕರಿಯಣ್ಣ ಸ್ಮರಿಸುತ್ತಾರೆ.
ಇದರೊಟ್ಟಿಗೆ ಪ್ರತಿ ಗ್ರಾಮದಲ್ಲೂ ಗೌರವಿಸಿ ಊಟ ಕೊಟ್ಟು, ವಸತಿ ವ್ಯವಸ್ಥೆ ಮಾಡಿದ ಆರೆಸ್ಸೆಸ್ ಕಾರ್ಯಕರ್ತರು, ರಾಮ ಭಕ್ತರು ಹಾಗೂ ಸಾಮಾನ್ಯ ನಾಗರಿಕರು ಗುರುತು ಪರಿಚಯ ಇಲ್ಲದಿದ್ದರೂ ಊಟ ಕೊಟ್ಟು ಹಸಿವು ನೀಗಿಸಿದ್ದಾರೆ ಎಂದು ಸ್ಮರಿಸಿಕೊಂಡಿದ್ದಾರೆ.