ಚಳ್ಳಕೆರೆ: ಎರಡನೇ ಹಂತದ ಕೊರೊನಾ ನಿಯಂತ್ರಣಕ್ಕೆ ನಗರಸಭೆ ಆಡಳಿತ ಮುಂದಾಗಿದ್ದು, ಪ್ರಾರಂಭದ ಹಂತ ದಲ್ಲೇ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡುವಂತೆ ಮನವಿ ಮಾಡುತ್ತಾ ನಗರದ ನಾಲ್ಕೂ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಪ್ರತಿಯೊಬ್ಬರೂ ಜೀವ ರಕ್ಷಣೆಗಾಗಿ ಮಾಸ್ಕ್ ಉಪಯೋಗಿಸಿ ಕೊರೊನಾ ನಿಯಂತ್ರಿಸಲು ಸಹಕರಿಸುವಂತೆ ನಗರ ಸಭೆಯಿಂದ ಮನವಿ ಮಾಡಿದರು.
ಅಧ್ಯಕ್ಷೆ ಸಿ.ಬಿ.ಜಯಲಕ್ಷ್ಮೀ ಮಾತನಾಡಿ, ಜಿಲ್ಲಾಡಳಿತ ಈಗಾಗಲೇ ಕೊರೊನಾ ನಿಯಂತ್ರಣದ ಬಗ್ಗೆ ತಾಲೂಕು ಮಟ್ಟದ ಅ ಧಿಕಾರಿಗಳಿಗೆ ಸೂಚನೆ ನೀಡಿದ್ದು, ಕೊರೊನಾವನ್ನು ಶೀಘ್ರದಲ್ಲೇ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಗರಸಭೆ ಆಡಳಿತ ಇಂದು ಬೀದಿಗೆ ಇಳಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಕೊರೊನಾ ನಿಯಂತ್ರಣ ಇಂದಿನ ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರ ಮತ್ತು ಅಧಿ ಕಾರಿಗಳ ಸಹಕಾರ ಪಡೆದು ಇನ್ನಷ್ಟು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಪೌರಾಯುಕ್ತ ಪಿ.ಪಾಲಯ್ಯ ಮಾತನಾಡಿ, ಮಾಸ್ಕ್ ಧರಿಸದೆ ಓಡಾಡುವ ಸಾರ್ವಜನಿಕರ ವಿರುದ್ಧ ದಂಡ ವಿಧಿ ಸಲು ನಗರಸಭೆ ಮುಂದಾಗಿದ್ದು, ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಧರಿಸದ ಕಾರಣ ದಂಡ ವಿಧಿ ಸಲಾಗಿದೆ. ಕೊರೊನಾ ನಿಯಂತ್ರಣಕ್ಕೆ ನಗರಸಭೆ ಆಡಳಿತ ಎಲ್ಲಾ ರೀತಿಯ ಸಹಕಾರ ನೀಡಲು ಸಜ್ಜಾಗಿದೆ. ಈಗಾಗಲೇ ನಗರಸಭೆಗೆ ಸ್ವತ್ಛತೆ ಕುರಿತಂತೆ ಪೌರಕಾರ್ಮಿಕರಿಗೆ ಸಾಕಷ್ಟು ಮಾರ್ಗದರ್ಶನ ಮಾಡಿದ್ದು, ಕೊರೊನಾ ನಿಯಂತ್ರಣವಾಗುವ ತನಕ ನಗರಸಭೆ ಸ್ವತ್ಛತಾ ಕಾರ್ಯವನ್ನು ಸಮಾರೋಪಾದಿಯಲ್ಲಿ ಕೈಗೊಳ್ಳಲಿದೆ ಎಂದರು.
ಉಪಾಧ್ಯಕ್ಷೆ ಜೈತುಂಬಿ, ನಗರಸಭಾ ಸದಸ್ಯರಾದ ಕೆ.ವೀರಭದ್ರಪ್ಪ, ಸಿ.ಶ್ರೀನಿವಾಸ್, ಎಂ.ಜೆ. ರಾಘವೇಂದ್ರ, ಚಳ್ಳಕೆರೆಯಪ್ಪ, ಪೌರಾಯುಕ್ತ ಪಾಲಯ್ಯ, ವ್ಯವಸ್ಥಾಪಕ ಲಿಂಗರಾಜು, ಕಂದಾಯಾಧಿ ಕಾರಿ ವಿ.ಈರಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಕಿರಿಯ ಆರೋಗ್ಯ ನಿರೀಕ್ಷಕರಾದ ದಾದಾಪೀರ್, ಗಣೇಶ್, ಕೃಷ್ಣಮೂರ್ತಿ, ರಮೇಶ್, ಬೋರಣ್ಣ ಮುಂತಾದವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ನೆಹರೂ ವೃತ್ತ, ಅಂಬೇಡ್ಕರ್ ವೃತ್ತ ಮುಂತಾದ ಕಡೆಗಳಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದರಲ್ಲದೆ, ಸಾರ್ವಜನಿಕರಿಗೂ ಸಹ ಉಚಿತ ಮಾಸ್ಕ್ ನೀಡಿ ಕೊರೊನಾ ಓಡಿಸುವಂತೆ ಮನವಿ ಮಾಡಿದರು.