ಚಿತ್ರದುರ್ಗ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸಂಕಷ್ಟಕ್ಕೆ ಸಿಲುಕಿರುವ ನೋಂದಾಯಿತ ಕಟ್ಟಡ ಕಾರ್ಮಿಕರ ಕುಟುಂಬಗಳಿಗೆ ಕೂಡಲೇ ವಾರಕ್ಕೆ ಎರಡು ಸಾವಿರ ರೂ. ಪರಿಹಾರ ನೀಡಲು ಒತ್ತಾಯಿಸಿ ಸಿಐಟಿಯು ವತಿಯಿಂದ ಸೋಮವಾರ ಅಪರ ಜಿಲ್ಲಾ ಧಿಕಾರಿ ಮೂಲಕ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಘೋಷಿಸಿರುವುದರಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತವಾಗಲಿವೆ. ಲಕ್ಷಾಂತರ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಮತ್ತೆ ಬೀದಿಗೆ ಬಿದ್ದಿದ್ದಾರೆ.
ಸಾವಿರಾರು ವಲಸೆ ಕಾರ್ಮಿಕರು ಪುನಃ ತಮ್ಮ ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಮುಂದಿನ ಮೂರು ತಿಂಗಳ ಕಾಲ ಕೊರೊನಾ ಎರಡನೆ ಅಲೆ ಇರುತ್ತದೆಂದು ತಜ್ಞರು ಹೇಳಿದ್ದು, ಈಗಾಗಲೆ ಕಷ್ಟದಲ್ಲಿರುವ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ ತುತ್ತಾಗಿವೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಘೋಷಿಸಲಾದ ಕೋವಿಡ್ ಐದು ಸಾವಿರ ರೂ.ಪರಿಹಾರವನ್ನು ಬಾಕಿಯಿರುವ ಒಂದು ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ವರ್ಗಾವಣೆಯಾಗಬೇಕು ಎಂದು ಮನವಿ ಸಲ್ಲಿಸಿದರು.
ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣ, ಪಿಂಚಣಿ, ವೈದ್ಯಕೀಯ ಸೌಲಭ್ಯ ಇನ್ನು ಮೊದಲಾದ ಧನ ಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಏ.30ರವರೆಗೆ ವಿಸ್ತರಿಸಲಾಗಿರುವ ಅವಧಿ ಯನ್ನು ಮುಂದಿನ ಮೂರು ತಿಂಗಳ ಕಾಲ ವಿಸ್ತರಿಸಬೇಕು. ಅರ್ಜಿ ಸಲ್ಲಿಸಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳ ಸೌಲಭ್ಯಗಳ ಅರ್ಜಿಗಳನ್ನು ಕೂಡಲೆ ಇತ್ಯರ್ಥಪಡಿಸಿ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕು. ಎರಡನೆ ಕೋವಿಡ್ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಊಟ, ವಸತಿ ಮತ್ತು ಅವರ ಊರುಗಳಿಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ರಾಜ್ಯ ಬಿಲ್ಡರ್ ಅಸೋಸಿಯೇಷನ್ ಜತೆ ಮಾತುಕತೆ ನಡೆಸಿ ಕಾರ್ಮಿಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆ ನಿವಾರಣೆಗೆ ತಕ್ಷಣವೇ ಕಲ್ಯಾಣ ಮಂಡಳಿ ಸಭೆ ಕರೆದು ಚರ್ಚಿಸಿ ಕಾರ್ಮಿಕರ ನೆರವಿಗೆ ನಿಲ್ಲಬೇಕೆಂದು ಆಗ್ರಹಿಸಲಾಯಿತು. ಈ ವೇಳೆ ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್, ಕಟ್ಟಡ ಕಾರ್ಮಿಕರ ಸಮಿತಿ ಜಿಲ್ಲಾಧ್ಯಕ್ಷ ಬಿ.ಸಿ.ನಾಗರಾಜಚಾರಿ, ಜೆ.ಹನುಮಂತ ಮತ್ತಿತರರಿದ್ದರು.