ಚಿತ್ರದುರ್ಗ: ಕೊರೊನಾ ಎರಡನೇ ಅಲೆ ನಿಯಂತ್ರಣದ ಉದ್ದೇಶದಿಂದ ಸರ್ಕಾರ ಘೋಷಣೆ ಮಾಡಿರುವ ವಾರಾಂತ್ಯ ಕರ್ಫ್ಯೂಗೆ ಎರಡನೇ ದಿನವೂ ಜಿಲ್ಲೆಯ ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಎರಡನೇ ಅಲೆಯ ಮೂಲಕ ಅಪ್ಪಳಿಸಿರುವ ಕೊರೊನಾ ವೈರಾಣು ಸಾಕಷ್ಟು ಅಪಾಯಕಾರಿ ಎನ್ನುವುದು ಮನವರಿಕೆಯಾಗಿ, ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ, ಆಸ್ಪತ್ರೆಗಳ ಸಮಸ್ಯೆಗಳು ಕಣ್ಣೆದುರು ಇರುವುದರಿಂದ ಜನ ಸ್ವಯಂ ಪ್ರೇರಣೆಯಿಂದ ಜಾಘೃತರಾಗಿದ್ದಾರೆ.
ಅಗತ್ಯ ವಸ್ತುಗಳ ಖರೀ ಗಾಗಿ ಬೆಳಗ್ಗೆ 6 ರಿಂದ 10 ಗಂಟೆವರೆಗೆ ಸಮಯ ನಿಗದಿ ಮಾಡಿರುವುದರಿಂದ ಸಾಕಷ್ಟು ಜನ ಮನೆಯಿಂದ ಹೊರ ಬಂದು ತರಕಾರಿ, ದಿನಸಿ ಮತ್ತಿತರೆ ವಸ್ತುಗಳನ್ನು ಮುಗಿಬಿದ್ದು ಖರೀ ದಿ ಮಾಡುತ್ತಿದ್ದರು. ನಗರ, ಪಟ್ಟಣ ಪ್ರದೇಶಗಳು ಸಂಪೂರ್ಣ ಬಂದ್ ಆಗಿ ಬಿಕೋ ಎನ್ನುವುದು ಸಾಮಾನ್ಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾದ ವಾತಾವರಣ ಇದೆ. ಬಸ್ ವ್ಯವಸ್ಥೆ ವಿರಳವಾಗಿರುವುದು ಹಾಗೂ ನಗರ ಪ್ರದೇಶಗಳು ಸಂಪೂರ್ಣ ಬಂದ್ ಆಗಿರುವುದರಿಂದ ಹಳ್ಳಿ ಜನ ಊರು ಬಿಟ್ಟು ಹೊರ ಹೋಗುವುದು ಅಷ್ಟಾಗಿ ಕಾಣಲಿಲ್ಲ. ನಗರದ ಗಾಂಧಿ ವೃತ್ತದಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು.
ಅತ್ತಿತ್ತ ಓಡಾಡುವವರನ್ನು ಹಿಡಿದು ಪ್ರಶ್ನಿಸಿ ಸಕಾರಣ ಇದ್ದವರನ್ನು ಬಿಟ್ಟು, ವಿನಾಕಾರಣ ರಸ್ತೆಗೆ ಬಂದವರನ್ನು ಹಿಡಿದು ದಂಡ ಹಾಕಿದ ಪ್ರಸಂಗಗಳೂ ನಡೆದವು.
ಮಾಂಸ ಪ್ರಿಯರಿಗೆ ಪೊಲೀಸರ ಶಾಕ್: ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಘೋಷಣೆಯಾಗಿರುವ ವಾರಾಂತ್ಯದ ಕರ್ಫ್ಯೂ ಕಳೆಯಲು ಮನೆಯಲ್ಲೇ ಇರುವವರಿಗೆ ಭಾನುವಾರದ ಬಾಡೂಟ ಮಿಸ್ ಆಗಿದೆ. ಭಾನುವಾರ ಮಹಾವೀರ ಜಯಂತಿ ಕಾರಣಕ್ಕೆ ಜಿಲ್ಲಾಡಳಿತ ಮಾಂಸ ಮಾರಾಟ ಬಂದ್ ಮಾಡಿತ್ತು. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಇದ್ದ ಬಿಡುವಿನ ವೇಳೆಯಲ್ಲಿ ಮಟನ್ ಮಾರುಕಟ್ಟೆಗೆ ಬಂದ ಬಹುತೇಕರು ನಿರಾಸೆಯೊಂದಿಗೆ ಖಾಲಿ ಚೀಲದೊಂದಿಗೆ ಮನೆಗೆ ನಡೆದರು.
ಮಟನ್ ಮಾರ್ಕೆಟ್ ತುಂಬಾ ಲಾಠಿ ಹಿಡಿದ ಪೊಲೀಸರು ಕಾಣಿಸುತ್ತಿದ್ದರು. ಮಹಾವೀರ ಜಯಂತಿ ಅಂಗವಾಗಿ ಮಾಂಸ ಮಾರಾಟ ಇಲ್ಲದಿರುವುದು ತಿಳಿಯದೇ ಮಾರುಕಟ್ಟೆಗೆ ಬಂದವರು ಪೊಲೀಸರಿಂದ ವಿಷಯ ತಿಳಿದು ವಾಪಾಸಾಗುತ್ತಿದ್ದರು. ಕೆಲ ಮಟನ್ ಅಂಗಡಿಯವರು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿರುವುದನ್ನು ತಿಳಿದು ಪೊಲೀಸರು ಅಲ್ಲಿಗೆ ಧಾವಿಸಿ ಬಾಗಿಲು ಹಾಕಿಸಿದರು.