Advertisement

ವಿಮರ್ಶಕರ ಹಂಗಿಲ್ಲದೆ ಓದುಗರ ತಲುಪಿದ ಚಿತ್ತಾಲ

12:11 PM Aug 12, 2018 | Team Udayavani |

ಬೆಂಗಳೂರು: ವಿಮರ್ಶಕರ ಹಂಗಿಲ್ಲದೆ ಓದುಗರನ್ನು ತಲುಪಿದ ಕಾದಂಬರಿಕಾರ ಅಂದರೆ ಅದು ಯಶವಂತ ಚಿತ್ತಾಲ ಎಂದು ಸಾಹಿತಿ ಜಯಂತ ಕಾಯ್ಕಿಣಿ ಬಣ್ಣಿಸಿದ್ದಾರೆ. ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ  “ಯಶವಂತ ಚಿತ್ತಾಲರ ಬದುಕು ಬರಹ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ಚಿತ್ತಾಲರು ವಿಮರ್ಶಕರ ಹಂಗಿಲ್ಲದೆ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದರು. ಇವರ ಶಿಕಾರಿ ಕಾದಂಬರಿ ಸಾಕಷ್ಟು ಜನಪ್ರಿಯವಾಯಿತು. ಈ ವೇಳೆ ಅವರ ವಿರುದ್ಧ ಪತ್ರಿಕೆಯೊಂದರಲ್ಲಿ ವಿಮರ್ಶೆ ಬರೆಸಲಾಯಿತು. ಈ ಸತ್ಯವನ್ನು ಇತ್ತೀಚೆಗಷ್ಟೇ ಆ ವಿಮರ್ಶೆ ಬರೆದವರು ತಮ್ಮ ಬಳಿ ನೋವಿನಿಂದ ಹೇಳಿಕೊಂಡಿದ್ದರು ಎಂದು ತಿಳಿಸಿದರು.

ಬಾಂಬೆಯಲ್ಲಿ ಚಿತ್ತಾಲರೊಂದಿಗೆ ಕಳೆದ ದಿನಗಳನ್ನು ಮೆಲುಕು ಹಾಕಿದ ಅವರು, ಚಿತ್ತಾಲರು ಭಾವ ಜೀವಿಯಾಗಿದ್ದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರನ್ನೂ ಒಂದೆ ಸಮನಾಗಿ ಕಾಣುವ ಮನುಷ್ಯತ್ವದ ದೊಡ್ಡಗುಣ ಅವರಲ್ಲಿ ಅಡಕವಾಗಿತ್ತು ಎಂದು ಹೇಳಿದರು.

ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ ಎಂದು ಚಿತ್ತಾಲರು ಆಗಾಗ ಹೇಳುತ್ತಿದ್ದರು. ಅವರ ಈ ಮಾತಿನಲ್ಲಿ ಒಳಾರ್ಥವಿದೆ. ನಾವು ಮನುಷ್ಯರು ಎಂದು ಹೇಳುವುದೇ ದೊಡ್ಡ ತಪ್ಪು, ಬದುಕನ್ನು ಪ್ರೀತಿಸುವುದರ ಮೂಲಕ ನಾವು ಮನುಷ್ಯರಾಗಬೇಕು ಎಂದರು.

ಚಿತ್ತಾಲರ ಮನೆ ಸಾಹಿತ್ಯದ ತಾಣ: ಚಿತ್ತಾಲರ ಬಾಂಬೆ ಮನೆ ಸಾಹಿತ್ಯದ ತಾಣವಾಗಿತ್ತು. ನಮ್ಮ ಸ್ನೇಹತರ ತಂಡ ವಾರದ ಕೊನೆಯಲ್ಲಿ ಅಲ್ಲಿ ಸೇರುತ್ತಿತ್ತು. ಸಾಹಿತ್ಯದ ಕುರಿತಾದ ವಿಚಾರಗಳನ್ನೇ ಮಾತನಾಡುತ್ತಿದ್ದೆವು. ಚಿತ್ತಾಲರು ತಮ್ಮ ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿ ಸೇರಿದಂತೆ ಹಲವು ಕಾದಂಬರಿಗಳನ್ನು ನಮಗೆ ಹೇಳುತ್ತಿದ್ದರು.

Advertisement

ಗೋಪಾಲಕೃಷ್ಣ ಅಡಿಗರು ಸೇರಿದಂತೆ ಹಲವು ಹೆಸರಾಂತ ಕನ್ನಡ ಸಾಹಿತಿಗಳು ಇಲ್ಲಿ ಸೇರುತ್ತಿದ್ದರು. ಹೀಗಾಗಿ ಕನ್ನಡ ಹೆಸರಾಂತ ಸಾಹಿತಿಗಳನ್ನು ಹತ್ತಿರದಿಂದ ನೋಡುವ ಸೌಭಾಗ್ಯ ನನಗೆ ಒದಗಿತ್ತು ಎಂದರು. ಇತ್ತೀಚಿನ ದಿನಗಳಲ್ಲಿ ಫ‌ಲಾಪೇಕ್ಷೆಯನ್ನಷ್ಟೇ ಬಯಸುವ  ಪ್ರಕಾಶಕರು ಹುಟ್ಟಿಕೊಂಡಿದ್ದಾರೆ. ಇಂತವರಿಂದ ಉತ್ತಮ ಪುಸ್ತಕಗಳು ಮರು ಮುದ್ರಣ ಕಾಣುವುದು ಅಸಾಧ್ಯ.

ಒಳ್ಳೇಯ ಪ್ರಕಾಶಕರು ಸಾಹಿತಿಯೊಬ್ಬರ ಕೃತಿಗಳು ಖರ್ಚಾದ ತಕ್ಷಣವೆ ಮತ್ತೆ ಮರು ಮುದ್ರಣ ಮಾಡುತ್ತಾರೆ. ಕೃತಿಕಾರ ನಿಧನದ ನಂತರವೂ ಅದನ್ನು ಮುಂದುವರಿಸುತ್ತಾರೆ. ಆದರೆ ಈ ಮನೋಭಾವನೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಪಿಟಿಸಿಎಲ್‌ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಎಚ್‌.ಸಿ.ಮುಕುಂದ್‌, ಮಾಜಿ ಅಧ್ಯಕ್ಷ ರಾಮನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next