Advertisement

ತರಾಸು ಬರಹದಲ್ಲಿ ಪ್ರಾಂತೀಯ ಸೊಗಡು-ಸಾಮಾಜಿಕ ಪ್ರಜ್ಞೆ

04:06 PM Jun 30, 2019 | Naveen |

ಚಿತ್ರದುರ್ಗ: ಜಿಲ್ಲೆಯ ಹೆಮ್ಮೆಯ ಸಾಹಿತಿ ತರಾಸುರವರ ಬರವಣಿಗೆಯಲ್ಲಿ ಪ್ರಾಂತೀಯ ಸೊಗಡು ಮತ್ತು ಸಾಮಾಜಕ ಪ್ರಜ್ಞೆ ಇರುತ್ತಿತ್ತು ಎಂದು ಸರ್ಕಾರಿ ಪ್ರಥಮ ದರ್ಜೆ ಕಲಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ| ಪ್ರೇಮಪಲ್ಲವಿ ಹೇಳಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ನಡೆಯುತ್ತಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೆ ದಿನವಾದ ಶನಿವಾರದ ವಿಚಾರಗೋಷ್ಠಿಯಲ್ಲಿ ‘ತರಾಸು ಸಾಹಿತ್ಯ ಒಂದು ಅವಲೋಕನ’ ವಿಷಯದ ಬಗ್ಗಾ ಅವರು ಮಾತನಾಡಿದರು.

ಧರ್ಮ, ದೇವರು, ರಾಜಕೀಯ ಹೆಸರಿನಲ್ಲಿ ನಡೆಯುತ್ತಿದ್ದ ಬೂಟಾಟಿಕೆಯನ್ನು ತರಾಸು ತಮ್ಮ ಬರವಣಿಗೆಯಲ್ಲಿ ಅತ್ಯುಗ್ರವಾಗಿ ಖಂಡಿಸುತ್ತಿದ್ದರು. ಸಮಾಜದ ನೋವು, ಜನರ ಕೂಗು, ಸಂಕಟ, ದುಃಖ-ದುಮ್ಮಾನಗಳಿಗೆ ಕಾದಂಬರಿ ಮೂಲಕ ಧ್ವನಿಯಾದರು. ಗುರುವನ್ನು ಮೀರಿಸಿದ ಶಿಷ್ಯ ಎನ್ನಿಸಿಕೊಂಡರೂ ಅವರಲ್ಲಿ ಅಹಂಕಾರವಿರಲಿಲ್ಲ ಎಂದರು.

ಜೀತದ ಜೀವ, ಮನೆಗೆ ಬಂದ ಮಗಳು, ಚಂದ್ರವಳ್ಳಿ ತೋಟ, ಗಾಳಿಮಾತು ಕಾದಂಬರಿಗಳ ಮೂಲಕ ಸಮಾಜದ ಅಂತರಂಗವನ್ನು ಚಿತ್ರಿಸುವುದು ತರಾಸು ಉದ್ದೇಶವಾಗಿತ್ತು. ‘ಮಸಣದ ಹೂವು’ ಕಾದಂಬರಿಯ ಮೂಲಕ ವೇಶ್ಯೆಯ ಸಮಸ್ಯೆಯನ್ನು ಚಿತ್ರಿಸಿದ್ದಾರೆ. ಇತಿಹಾಸ, ಪುರಾಣದ ಆಳ ಅಭ್ಯಾಸ ಮಾಡಿದ್ದರು. ಓದುಗರ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲ ಅಭಿವ್ಯಕ್ತಿ ಅವರದಾಗಿತ್ತು ಎಂದು ಸ್ಮರಿಸಿದರು.

‘ಮನೆಗೆ ಬಂದ ಮಹಾಲಕ್ಷ್ಮೀ’ ತರಾಸು ಅವರ ಮೊಟ್ಟ ಮೊದಲ ಕಾದಂಬರಿ. ಹೆಣ್ಣಿನ ಸ್ವಾತಂತ್ರ್ಯದ ಬಯಕೆಯನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದಾರೆ. ಧಿಧೀಮಂತ ಬರಹಗಾರರಾಗಿದ್ದ ತರಾಸುರವರ ಕಾದಂಬರಿಯಲ್ಲಿ ರೊಚ್ಚು, ಆಕ್ರೋಶ, ಸಿಟ್ಟಿನ ಸಮ್ಮಿಲನವಿದೆ. ಪುರುಷಾವತಾರದ ಮೂಲಕ ಮೊದಲು ಮನುಷ್ಯ ಮನುಷ್ಯನ್ನು ಪ್ರೀತಿಸಬೇಕು ಎನ್ನುವ ಸಂದೇಶ ನೀಡಿದರು. ಸಾಮಾಜಿಕ ಸಂಘರ್ಷ, ದೀನ ದಲಿತರ ಬಗ್ಗೆ ಅವರಲ್ಲಿದ್ದ ದೃಷ್ಟಿಕೋನ ಮೆಚ್ಚುವಂಥದ್ದು. ಗೋಮುಖ ವ್ಯಾಘ್ರರಿಗೆ ಸಿಂಹಸ್ವಪ್ನವಾಗಿದ್ದರು. ಅವರ ಕಾದಂಬರಿಯಲ್ಲಿ ಸದಾ ಸಂಘರ್ಷ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಕಾಣಬಹುದು. ಸಾಮಾಜಿಕ ವಿಡಂಬಣೆ, ಹೆಣ್ಣುಮಕ್ಕಳ ಸಮಸ್ಯೆಗಳನ್ನು ಚಿತ್ರಿಸುವ ಭಾಷಾ ಶೈಲಿ ಅವರದಾಗಿತ್ತು. ತಮ್ಮದೇ ಆದ ಭಾಷೆ, ತನ್ನತನವನ್ನು ಬರಹದುದ್ದಕ್ಕೂ ಉಳಿಸಿಕೊಂಡಿದ್ದರು. ಓದುಗರ ಕಣ್ಣಿಗೆ ಕಟ್ಟುವ ಬರಹ, ಭಾಷಾ ಶೈಲಿ ಅವರಿಗೆ ಒಲಿದಿತ್ತು ಎಂದು ವಿಶ್ಲೇಷಿಸಿದರು.

Advertisement

ಕನ್ನಡ ಭಾಷಾ ಬೋಧಕಿ ಜಿ.ಆರ್‌. ಹಳ್ಳಿಯ ಡಾ| ಸವಿತಾ, ‘ತರಾಸುರವರ ಐತಿಹಾಸಿಕ ಕಾದಂಬರಿಗಳು’ ಕುರಿತು ಉಪನ್ಯಾಸ ನೀಡಿದರು. ವಿಶ್ವದಲ್ಲಿ ಚಿತ್ರದುರ್ಗ ಐತಿಹಾಸಿಕ ಸ್ಥಳವಾಗಿ ಗುರುತಿಸಿಕೊಂಡಿದೆ ಎಂದರೆ ಅದಕ್ಕೆ ಅನೇಕ ಸಾಹಿತಿಗಳು ಕಾರಣ. ಅಂಥವರ ಸಾಲಿನಲ್ಲಿ ತರಾಸು ಕೂಡ ಒಬ್ಬರು. ತರಾಸು ವ್ಯಕ್ತಿತ್ವ ಸಮುದ್ರವಿದ್ದಂತೆ. ಸಾಹಿತಿ ಪರಿಸರದ ಕೂಸು ಮತ್ತು ಯುಗದ ಧ್ವನಿ. ತರಾಸು ಪ್ರಜ್ಞಾವಂತ ಲೇಖಕರಾಗಿದ್ದರು ಎಂದು ಬಣ್ಣಿಸಿದರು.

ಐತಿಹಾಸಿಕ ಕಾದಂಬರಿಯೇ ಬೇರೆ. ಹಾಗಾಗಿ ತರಾಸುರವರು ಐತಿಹಾಸಿಕ ಕಾದಂಬರಿಗಳನ್ನು ಬರೆಯಲು ಆರಂಭಿಸಿದಾಗ ಅನೇಕ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾಯಿತು. ಚಿತ್ರದುರ್ಗದ ಪಾಳೇಗಾರರ ಇತಿಹಾಸವನ್ನು ತಿಳಿದುಕೊಳ್ಳಬೇಕಾದರೆ ತರಾಸುರವರ ಐತಿಹಾಸಿಕ ಕಾದಂಬರಿಗಳನ್ನು ಓದಲೇಬೇಕು. ಹುಲ್ಲೂರು ಶ್ರೀನಿವಾಸ ಜೋಯಿಸರ ಶಿಷ್ಯರಾಗಿದ್ದ ತರಾಸು ಅವರು ಗುರುವನ್ನೇ ಮೀರಿಸಿ ಮೆಚ್ಚುಗೆ ಗಳಿಸಿದ್ದವರು ಎಂದು ಹೇಳಿದರು.

ಭರಮಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಆರ್‌. ಮಹೇಶ್‌ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಡಾ| ಮೀರಾಸಾಬಿಹಳ್ಳಿ ಶಿವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ| ದೊಡ್ಡಮಲ್ಲಯ್ಯ, ಚಳ್ಳಕೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಇದ್ದರು. ರಂಗಮ್ಮ ಸ್ವಾಗತಿಸಿದರು. ಶಿಕ್ಷಕ ಕೆ. ರಾಮಪ್ಪ ನಿರೂಪಿಸಿದರು. ಮಂಜುನಾಥ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next