ಬೆಂಗಳೂರು: ಡಿಬಾಸ್ ದರ್ಶನ್ ಅವರ ʼಕಾಟೇರʼ ಸಿನಿಮಾ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಟಿಕೆಟ್ ಸೋಲ್ಡ್ ಔಟ್ ಆಗುವ ಮೂಲಕ ಸಿನಿಮಾದ ಬಗೆಗಿನ ಕುತೂಹಲ ಹೆಚ್ಚಾಗಿದೆ.
ʼಕ್ರಾಂತಿʼ ಬಳಿಕ ದರ್ಶನ್ ʼಕಾಟೇರʼ ದಲ್ಲಿ ಕಾಣಿಸಿಕೊಳ್ಳುತ್ತಿದ್ದ ʼರಾಬರ್ಟ್ʼ ನಿರ್ದೇಶಕ ತರುಣ್ ಸುಧೀರ್ ದರ್ಶನ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ಸಿಕ್ಕಾಪಟ್ಟೆ ಸದ್ದು ಮಾಡಿದೆ.
ಈ ನಡುವೆ ದರ್ಶನ್ ಅವರ ಮುಂದಿನ ಸಿನಿಮಾದ ಬಗ್ಗೆಯೂ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಅವರು ದರ್ಶನ್ ಅವರ ಸಿನಿಮಾದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ವಿಚಾರ ಗಾಂಧಿನಗರದಲ್ಲಿ ಹರಿದಾಡುತ್ತಿದೆ.
ʼಜೋಗಿʼ ಪ್ರೇಮ್ ದರ್ಶನ್ ಅವರೊಂದಿಗೆ ಸಿನಿಮಾ ಮಾಡುತ್ತಿರುವ ವಿಚಾರ ಗೊತ್ತೇ ಇದೆ. ಈ ಸಿನಿಮಾದ ಬಗ್ಗೆ ಹೈಪ್ ಹೆಚ್ಚಿದೆ. ಇದೇ ಸಿನಿಮಾದಲ್ಲಿ ಚಿರಂಜೀವಿ ನಟಿಸಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪ್ರೇಮ್ ಹೈದರಾಬಾದ್ ನಲ್ಲಿ ಚಿರಂಜೀವಿ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ಸದ್ಯ ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಒಂದು ವೇಳೆ ಇದು ಅಧಿಕೃತವಾದರೆ 22 ವರ್ಷದ ಬಳಿಕ ಚಿರಂಜೀವಿ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊನೆಯ ಬಾರಿ ʼಸಿಪಾಯಿʼ(1996) ರಲ್ಲಿ ರವಿಚಂದ್ರನ್ ಜೊತೆ ಕಾಣಿಸಿಕೊಂಡಿದ್ದರು.
ಸದ್ಯ ‘ಭೋಲಾ ಶಂಕರ್’ ಬಳಿಕ ಚಿರಂಜೀವಿ ʼಮೆಗಾ 156ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.